ಕೆ.ಆರ್.ಪೇಟೆ: ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ದಲಿತ ಯುವ ರೈತ ಜಯಕುಮಾರ್ ಜೀವಂತವಾಗಿ ದಹನವಾಗಿರುವ ಘಟನೆಯನ್ನು ಸಮಗ್ರವಾಗಿ ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮೃತ ಕುಟುಂಬಕ್ಕೆ ಕನಿಷ್ಠ 50ಲಕ್ಷ ಪರಿಹಾರ ನೀಡಬೇಕು. ಮೃತನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ರಾಜ್ಯ ಬಿಎಸ್ ಪಿ ಅಧ್ಯಕ್ಷ ಡಾ.ಎಂ. ಕೃಷ್ಣಮೂರ್ತಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಅವರು ಇಂದು ಬಿಎಸ್ ಪಿ ಪಕ್ಷದ ರಾಜ್ಯ ಪದಾಧಿಕಾರಿಗಳು ಹಾಗೂ ತಾಲೂಕು ಘಟಕದ ಅಧ್ಯಕ್ಷ ಬಸ್ತಿ ಪ್ರದೀಪ್ ಅವರೊಂದಿಗೆ ಕತ್ತರಘಟ್ಟ ಗ್ರಾಮದಲ್ಲಿ ಸವರ್ಣೀಯ ವ್ಯಕ್ತಿಯಿಂದ ದೌರ್ಜನ್ಯಕ್ಕೆ ಒಳಗಾಗಿ ಯುವಕ ಜಯಕುಮಾರ್ ಜೀವಂತ ದಹನವಾದ ಘಟನಾ ಸ್ಥಳಕ್ಕೆ ಬೇಟಿ ನೀಡಿ ಮೃತ ರೈತ ಜಯಕುಮಾರ್ ಅವರ ಧರ್ಮಪತ್ನಿ ಲಕ್ಷ್ಮೀ ಆವರಿಗೆ ಸಾಂತ್ವನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕತ್ತರಘಟ್ಟ ಗ್ರಾಮದಲ್ಲಿ ನಡೆದಿರುವ ಜೀವಂತವಾಗಿ ಸುಟ್ಟು ದಹನ ಮಾಡಿರುವ ಭೀಭತ್ಸವಾದ ಕೊಲೆಯ ಘಟನೆಯನ್ನು ಅವಲೋಕನ ಮಾಡಿದರೆ ಮೇಲ್ನೋಟಕ್ಕೆ ದಲಿತ ಯುವ ರೈತನಾದ ಜಯಕುಮಾರ್ ವಿರುದ್ದ ಸಂಚು ನಡೆಸಿ ಬರ್ಬರವಾಗಿ ಅವರ ಕೊಲೆ ಮಾಡಿರುವಂತೆ ಕಂಡು ಬರುತ್ತಿದೆ. ಪೊಲೀಸರು ಘಟನೆಯನ್ನು ಸಮಗ್ರವಾಗಿ ತನಿಖೆ ನಡೆಸಿ ಕೊಲೆ ಆರೋಪಿಯಾಗಿರುವ ಕೃಷ್ಣೆಗೌಡರ ಮಗ ಅನಿಲ್ ಕುಮಾರ್ ಅವರನ್ನು ಕೂಡಲೇ ಬಂಧಿಸಿ ನಿರ್ಧಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಬೇಕು. ರಾಜ್ಯ ಸರ್ಕಾರವು ಮೃತರ ಧರ್ಮಪತ್ನಿ ಲಕ್ಷ್ಮೀ ಅವರ ಕುಟುಂಬಕ್ಕೆ 50ಲಕ್ಷ ರೂಪಾಯಿ ಪರಿಹಾರ ನೀಡಿ, ಲಕ್ಷ್ಮೀ ಅವರಿಗೆ ಸರ್ಕಾರಿ ಉದ್ಯೋಗ ನೀಡಿ ಸಹಾಯ ಮಾಡಬೇಕು ಎಂದು ಕೃಷ್ಣಮೂರ್ತಿ ಆಗ್ರಹಿಸಿದರು.

ಜಯಕುಮಾರ್ ಅವರು ಸ್ಥಿತ ಪ್ರಜ್ಞ ರೈತನಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಹೇಡಿಯಲ್ಲ ಆದ್ದರಿಂದ ಮೃತ ರೈತನ ಸಾವಿನ ಪ್ರಕರಣವನ್ನು ಕೊಲೆ ಎಂದು ದಾಖಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ್ ಬಾಳದಂಡಿ ಅವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಎಸ್ ಪಿ ತಾಲೂಕು ಘಟಕದ ಅಧ್ಯಕ್ಷ ಬಸ್ತಿ ಪ್ರದೀಪ್, ಜಿಲ್ಲಾ ಕಾರ್ಯದರ್ಶಿ ಗಂಗಾಧರ್, ಮುಖಂಡರಾದ ಗಾಡಿಗನಹಳ್ಳಿ ಚೆಲುವರಾಜು, ಪರಮೇಶ್, ಗೋವಿಂದರಾಜು ಸೇರಿದಂತೆ ಕತ್ತರಘಟ್ಟ ಗ್ರಾಮಸ್ಥರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.