ಮೈಸೂರು – ಲೋಕಾಯುಕ್ತ ಸಂಸ್ಥೆಗೆ ಸರ್ಕಾರಿ ಅಧಿಕಾರಿಗಳ ಮತ್ತು ನೌಕರರ ಆಸ್ತಿ ವಿವರ ಲಭ್ಯವಾಗುವಂತ ವ್ಯವಸ್ಥೆ ರೂಪಿಸಬೇಕು. ಪ್ರತಿ ವರ್ಷ ಆಸ್ತಿ ವಿವರವನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು’ ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಹಶೀಲ್ದಾರದ ರೇಖಾ ರವರಿಗೆ ಪತ್ರ ನೀಡಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ ಎಸ್ ಚಂದ್ರಶೇಖರ್, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪ್ರತಿ ವರ್ಷ ಆಸ್ತಿ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ನಿಯಮ ಇದೆ. ಅಧಿಕಾರಿಗಳು, ನೌಕರರ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಪೋರ್ಟಲ್‌ನಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಲೋಕಾಯುಕ್ತರು ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು. ಮದ್ರಾಸ್ ಹೈಕೊಟ್೯ ನ್ಯಾಯ ಮೂರ್ತಿ ಸಿ.ವಿ.ಕಾರ್ತಿಕೇಯನ್ ಅವರು ಸರ್ಕಾರಿ ನೌಕರರ ಆಸ್ತಿ ವಿವರ ಸಾರ್ವಜನಿಕ ಮಾಹಿತಿ ಎಂದು ತೀರ್ಪು ನೀಡಿದ್ದಾರೆ. ಸರ್ಕಾರಿ ಉದ್ಯೋಗಿಗಳ ಆಸ್ತಿ ವಿವರ ಲೋಕಾಯುಕ್ತ ಸಂಸ್ಥೆಗೆ ಲಭ್ಯವಾಗುವಂತೆ ವ್ಯವಸ್ಥೆಯನ್ನು ರೂಪಿಸಿ ಮಾರ್ಚ್ ಅಂತ್ಯದೊಳಗೆ ವಿವರ ಅಪಲೋಡ್ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ಮಾತನಾಡಿ, ಆಸ್ತಿ ಬಹಿರಂಗ ಅಗತ್ಯ. ಸರಕಾರಿ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು ಎಂಬ ಸದುದ್ದೇಶದಿಂದ ನೌಕರರು ತಮ್ಮ ಆಸ್ತಿ ವಿವರ ನೀಡುವುದು ಕಡ್ಡಾಯವಾಗಿದೆ. ಆದರೆ, ಲೋಕಾಯುಕ್ತ ಅಧಿಕಾರಿಗಳು ಮನವಿ ಮಾಡಿದರೂ ಆಯಾ ಇಲಾಖೆಯ ಮುಖ್ಯಸ್ಥರು ಆ ಕುರಿತ ಮಾಹಿತಿ ನೀಡದೇ ಗೌಪ್ಯವಾಗಿರಿಸಿರುವುದು
ಸರಿಯಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್, ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷರಾದ ಕಡಕೋಳ ಜಗದೀಶ್, ಅಮಿತ್ ಕುಮಾರ್ ಹಾಜರಿದ್ದರು.