ಚಿಕ್ಕಮಗಳೂರು-ಪೊಲೀಸರಿಗಾಗಿ-ವಿವಿಧ-ಬೇಡಿಕೆಗಳನ್ನು- ಈಡೇರಿಸುವಂತೆ-ಆಗ್ರಹ

ಚಿಕ್ಕಮಗಳೂರು- ಪೊಲೀಸರು ಸಾಮಾನ್ಯರಂತೆ ಜೀವನ ನಡೆಸಲು ಅನುಕೂಲವಾಗುವಂತೆ ವಿವಿಧ ಬೇಡಿಕೆಗಳನ್ನು ಈಡೆರಿಸುವಂತೆ ಚಿಕ್ಕಮಗಳೂರು ಪೊಲೀಸ್ ಮಹಾ ಸಂಘ ಜಿಲ್ಲಾಧ್ಯಕ್ಷ ಡಾಕ್ಟರ್ ರೈತ ಮನೋಜ್ ಎಸ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.


ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪೊಲೀಸರ ಸೇವೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕಾಗಿದ್ದು ಅವರು ಸಾಮಾನ್ಯರಂತೆ ಒತ್ತಡ ರಹಿತ ಕೆಸಲ ಮಾಡಲು ಸಹಕಾರಿಯಾಗಲಿದೆ ಎಂದಿರುವ ಅವರು ಪ್ರಮುಖ ಬೇಡಿಕೆಯಾಗಿರುವ ಅಂತರ್‌ಜಿಲ್ಲಾ ವರ್ಗಾವಣೆಯಲ್ಲಿ ಬದಲಾವಣೆ ತಂದು ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿಯನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸಿ, ಬೆಂಗಳೂರಿನಲ್ಲಿ 7 ವರ್ಷ ಸೇವೆ ಸಲ್ಲಿಸಿದವರಿಗೆ ತಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಹೋಗಲು ಅವಕಾಶ ಮಾಡಿಕೊಡ ಬೇಕು ಎಂದು ಮನವಿ ಮಾಡಿದ್ದಾರೆ.


ಪೊಲೀಸರು ದಿನಕ್ಕೆ ಸುಮಾರು 12 ರಿಂದ 15 ಗಂಟೆ ಸೇವೆ ಸಲ್ಲಿಸುತ್ತಿದ್ದು ಇದನ್ನು 8 ಗಂಟೆ ಮಾತ್ರ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕಿದೆ ಎಂದ ಅವರು ವಾರದ ರಜೆ ನೀಡುವಂತೆ ಇಲ್ಲವೆ ಆ ರಜೆಯ ಭತ್ಯೆ ನೀಡುವಂತೆ ಒತ್ತಾಯಿಸಿದ್ದಾರೆ.


ಪೊಲೀಸ್ ಪಬ್ಲಿಕ್ ಸ್ಕೂಲ್ ಅನ್ನು ಕ್ಷೇತ್ರವಾರು ಸ್ಥಾಪಿಸಬೇಕು, ಆರೋಗ್ಯ ಭಾಗ್ಯ ಯೋಜನೆಯಲ್ಲಿ ಎಲ್ಲಾ ಖಾಯಿಲೆಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಮಾಡಬೇಕಿದೆ ಕಾರಣ ಈಗಾಗಲೇ ಕ್ಯಾನ್ಸರ್‌ನಿಂದ ಒಬ್ಬ ಪೊಲೀಸ್ ಇನ್ಸಪೆಕ್ಟರ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.. ನಂತರ ಕ್ಯಾನ್ಸರ್ ಖಾಯಿಲೆಯಿಂದ ಖಿನ್ನತೆಗೆ ಒಳಗಾಗಿ ಅಶೋಕ ನಗರ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಕುಮಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.


ಚುನಾವಣಾ ಪ್ರಣಾಳಿಕೆಯಲ್ಲಿ ಪೊಲೀಸರಿಗೆ 1 ತಿಂಗಳು ಹೆಚ್ಚುವರಿ ವೇತನವನ್ನು ನೀಡಲಾಗುವುದು ಎಂದು ಘೋಷಣೆ ಮಾಡಿದ್ದು, 2023-24ನೇ ಸಾಲಿನಲ್ಲಿ ಜಾರಿಗೆ ತರದೆ ಇದ್ದ ಕಾರಣ 2024-25ನೇ ಸಾಲಿನಲ್ಲಿ ಜಾರಿಗೆ ತರಬೇಕಾಗಿ ಆಗ್ರಹಿಸಿದ್ದಾರೆ.


ಹೊಯ್ಸಳ ವಾಹನಗಳಿಗೆ ಸಮರ್ಪಕ ಇಂಧನ ಒದಗಿಸುವುದು, ಎ.ಎಸ್.ಐ. ಮೇಲ್ಪಟ್ಟ ಅಧಿಕಾರಿ ವರ್ಗದವರಿಗೆ ಪೊಲೀಸರು ಹಾಗೂ ಹವಾಲ್ದಾರರಿಗೆ ನೀಡುವಂತೆ ಹಬ್ಬಗಳಲ್ಲಿ ಕರ್ತವ್ಯ ನಿರ್ವಹಿಸಲಿಕ್ಕೆ 15 ದಿನಗಳ ಸಂಬಳ ನೀಡುತ್ತಿದ್ದು, ಅದನ್ನು 30 ದಿನಗಳ ಸಂಬಳಕ್ಕೆ ವಿಸ್ತರಿಸುವುದು, ಪೊಲೀಸ್ 12 ಗಂಟೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಇತರೆ ಎಲ್ಲಾ ಇಲಾಖೆಗಳಿಗಿಂತ ವಿಭಿನ್ನವಾಗಿದ್ದು, ಈಗಿರುವ ಸಿ.ಎಲ್. 15 ಗಳನ್ನು 20 ಸಿ.ಎಲ್. ಆಗಿ ಪರಿವರ್ತಿಸುವುದು, ಪಿ.ಎಸ್.ಐ. ಹುದ್ದೆಗಳ ನೇಮಕಾತಿಯಲ್ಲಿ ಸೇವಾ ನಿರತ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದಲ್ಲಿ ಕೇವಲ 10% ಮೀಸಲಾತಿ ಇದ್ದು, ಇತರ ರಾಜ್ಯಗಳಲ್ಲಿ ಶೇಕಡಾ 20%% ರಿಂದ 30% ಕ್ಕಿಂತಲೂ ಹೆಚ್ಚಿರುತ್ತದೆ. ಕೂಡಲೇ ನಮ್ಮ ರಾಜ್ಯದಲ್ಲಿಯೂ ಕೂಡ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ.


ಪ್ರಸ್ತುತ 402 ಪಿ.ಎಸ್.ಐ. ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಅದರಲ್ಲಿ ಸೇವಾನಿರತ ಅಭ್ಯರ್ಥಿಗಳಿಗೆ ಕೇವಲ 40 ಹುದ್ದೆಗಳಿದ್ದು, ಜೊತೆಗೆ ಇನ್ನೂ 40 ಹುದ್ದೆಗಳನ್ನು ಹೆಚ್ಚಿಸಿದಾಗ ಸೇವಾ ನಿರತ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ.


ಈ ಹಿಂದೆ ಗೃಹ ಸಚಿವರಾಗಿದ್ದ ವಿ.ಎಸ್. ಆಚಾರ್ಯ ಅವರು ಸೇವಾ ನಿರತ ಅಭ್ಯರ್ಥಿಗಳಿಗೆ ಶೇ.30 ರಷ್ಟು ಮೀಸಲಾತಿ ಹೆಚ್ಚಿಸುವ ಭರವಸೆ ನೀಡಿದ್ದರು ಅದನ್ನು ಕೂಡಲೆ ಕಾರ್ಯರೂಪಕ್ಕೆ ತರಬೇಕಾಗಿದೆ,


ಬೇರೆ ಬೇರೆ ರಾಜ್ಯಗಳಲ್ಲಿರುವಂತೆ ರೋಟೇಷನ್ ಪ್ರಕಾರ ರಿಸರ್ವ ಸಿಬ್ಬಂದಿಗಳಾದ ಡಿ.ಎ.ಆರ್, ಸಿ.ಎ.ಆರ್. ರವರನ್ನು ಸಿವಿಲ್ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಳಿಸಿ ಕರ್ತವ್ಯಕ್ಕೆ ಉಪಯೋಗಿಸಿಕೊಳ್ಳ ಬೇಕು ಎಂದು ಮನವಿ ಮಾಡಿದ್ದಾರೆ.


ಔರಾದರ್ ವರದಿಯಲ್ಲಿನ ಲೋಪದೋಷಗಳನ್ನು ನಿವಾರಿಸಿ , ಎಲ್ಲಾ ಹಂತದ ಸಿಬ್ಬಂದಿ ಮತ್ತು ಅಧಿಕಾರಿಗಳ ಪತಿ-ಪತ್ನಿಯರ ವರ್ಗಾವಣೆ ಕುರಿತು ಯಾವುದೇ ಕಠಿಣ ನಿಯಮಾವಳಿಗಳನ್ನು ಹೇರದೆ ಮೂರು ವರುಷಗಳ ಸೇವೆ ಸಲ್ಲಿಸಿದ ಎಲ್ಲರ ಅರ್ಜಿಗಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಹಾಗೂ ಅಧಿಕಾರಿಗಳ ಮತ್ತು ಸಿಬ್ಬಂದಿಯ ವರ್ಗಾವಣೆ ವಿಷಯದಲ್ಲಿ ರಾಜಕೀಯ ಪ್ರಭಾವ ನುಸುಳದಂತೆ ಎಚ್ಚರವಹಿಸಬೇಕು ಮತ್ತು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷ ನೀಡಿದ ಆಶ್ವಾಸನೆಯಂತೆ ರಾತ್ರಿ ಪಾಳಿಯ ಪೊಲೀಸರಿಗೆ ಪ್ರತಿ ತಿಂಗಳು 5000 ರೂಗಳನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?