ತುಮಕೂರು: ತ್ರಿವಿಧದಾಸೋಹಿ, ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳ ಸೇವೆಯನ್ನು ಸಂಸ್ಮರಣೆಗೊಳಿಸಲು, ಮುಂದಿನ ತಲೆಮಾರಿಗೆ ಶ್ರೀಗಳ ಹಿರಿಮೆ, ಸಾಧನೆ ಪರಿಚಯಿಸಲು ನವೀಕರಣಗೊಳ್ಳುತ್ತಿರುವ ನಗರದ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.
ನಗರದರೈಲ್ವೆ ನಿಲ್ದಾಣದ ಬಳಿ ಜಿಲ್ಲಾ ಕನ್ನಡ ಸೇನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಾ.ಶಿವಕುಮಾರಸ್ವಾಮೀಜಿಗಳ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿದ ಮುಖಂಡರು, ಮಂಗಳವಾರ ನಡೆಯುವ ಶ್ರೀಗಳ 118ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು ಇಡುವ ನಿರ್ಧಾರವನ್ನು ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರು ಅಭಿಲಾಷೆಯೂ ಈ ನಿಲ್ದಾಣಕ್ಕೆ ಶ್ರೀಗಳ ಹೆಸರನ್ನು ನಾಮಕರಣ ಮಾಡಬೇಕು ಎಂಬುದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಕಡೆಯಿಂದ ಪೂರಕ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಜಿಲ್ಲಾಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ನಡೆದಾಡುವ ದೇವರಾಗಿ, ಸೇವಾಕಾರ್ಯ ಮಾಡಿ ಸಮಾಜ ಬೆಳಗಿದ ಸ್ವಾಮೀಜಿಗಳ ಹೆಸರು ಚಿರಸ್ಥಾಯಿ ಆಗಬೇಕು. ಮುಂದಿನ ಪೀಳಿಗೆಗೆ ಶ್ರೀಗಳ ಸೇವೆಯ ಪರಿಚಯ ಆಗಬೇಕು.ಅದಕ್ಕಾಗಿ ರೈಲ್ವೆ ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ಹಲವಾರು ಸಂಘ-ಸAಸ್ಥೆಗಳು ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಿವೆ, ಭಕ್ತರ ಆಶಯವೂ ಇದೇ ಆಗಿದೆ.ಇದೆಲ್ಲವನ್ನೂ ಮನಗಂಡು ಸರ್ಕಾರ ಶ್ರೀಗಳ 118ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೆ.ಎಸ್.ಸಿದ್ಧಲಿಂಗಪ್ಪ, ಗಿರಿಜಾಧನಿಯಾಕುಮಾರ್, ರೋಟರಿ ಅಧ್ಯಕ್ಷೆ ರಾಜೇಶ್ವರಿರುದ್ರಪ್ಪ, ಟಿ.ಆರ್.ಸದಾಶಿವಯ್ಯ, ಕೊಪ್ಪಳ್ ನಾಗರಾಜ್, ಕನ್ನಡ ಪ್ರಕಾಶ್, ಹೊಸಕೋಟೆ ನಟರಾಜು, ಗುರುರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ