ಕೆ.ಆರ್.ಪೇಟೆ: ರಾಜ್ಯದ ವಿವಿಧ ಇಲಾಖೆಯ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕು. ನಿವೃತ್ತಿಯ ಅನಂತರ ಜೀವನ ಭದ್ರತೆಗೆ ಕ್ರಮ ವಹಿಸಬೇಕು. ಏಜೆನ್ಸಿಗಳ ಮೂಲಕ ನೀಡುತ್ತಿರುವ ವೇತನ ವ್ಯವಸ್ಥೆಯನ್ನು ಬದಲಿಸಿ ಹೊರಗುತ್ತಿಗೆ ನೌಕರರ ಸೊಸೈಟಿ ರಚಿಸಿ ಸೊಸೈಟಿಯ ಮೂಲಕ ವೇತನ ಪಾವತಿಸುವಂತಾಗಬೇಕೆಂದು ಕರ್ನಾಟಕ ರಾಜ್ಯ ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮೇಗೌಡ ಆಗ್ರಹಿಸಿದರು.
ಅವರು ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ತಾಲೂಕು ಬಿಸಿಎಂ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮೊರಾರ್ಜಿ ವಸತಿ ಸಾಲೆ ಮತ್ತು ಕಾರ್ಮಿಕ ಇಲಾಖೆಯ ಹಾಸ್ಟೆಲ್ ಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ನಿರಂತರ ಹೋರಾಟದ ಫಲವಾಗಿ ಇಂದು ರಾಜ್ಯ ಸರ್ಕಾರ ಹೊರಗುತ್ತಿಗೆ ನೌಕರರ ವೇತನವನ್ನು 25715 ರೂಗಳಿಗೆ ಹೆಚ್ಚಿಸಿದೆ. ಇದಕ್ಕಾಗಿ ನಾವು ರಾಜ್ಯದ ಮುಖ್ಯಮಂತ್ರಿಗಳು, ಕಾರ್ಮಿಕ ಸಚಿವರು ಸೇರಿದಂತೆ ನಮ್ಮ ವ್ಯಾಪ್ತಿಯ ವಿವಿಧ ಇಲಾಖೆಗಳ ಸಚಿವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಆದರೆ ನಿರಂತರ ಬೆಲೆ ಏರಿಕೆಯ ಬದುಕಿನ ಕಾಲಘಟ್ಟದಲ್ಲಿ ಮಾಡಿರುವ ವೇತನ ಹೆಚ್ಚಳ ಅತಿ ಕಡಿಮೆ. ಆದಕಾರಣ ರಾಜ್ಯ ಸರ್ಕಾರ ಹೊರಗುತ್ತಿಗೆ ನೌಕರರ ವೇತನವನ್ನು ಕನಿಷ್ಠ 35 ಸಾವಿರ ರೂಗಳಿಗೆ ಹೆಚ್ಚಿಸಬೇಕು.

ವಸತಿ ನಿಲಯಗಳ ಹೊರಗುತ್ತಿಗೆ ನೌಕರರಿಗೆ ಇದುವರೆಗೂ ನೇಮಕಾತಿ ಪತ್ರವನ್ನೆ ನೀಡಿಲ್ಲ. ನಿಯಮಾನುಸಾರ ಹೊರಗುತ್ತಿಗೆ ಏಜೆನ್ಸಿಗಳು ಪ್ರತಿ ತಿಂಗಳ 05 ನೇ ತಾರೀಕನ ಒಳಗೆ ವೇತನ ಪಾವತಿ ಮಾಡುತ್ತಿಲ್ಲ. ಏಜೆನ್ಸಿ ಮೂಲಕ ನೌಕರರ ನೇಮಕಾತಿ ಶೋಷಣೆಗೆ ದಾರಿ ಮಾಡಿಕೊಟ್ಟಿದೆ.
ಈ ಹಿಂದೆ ನಾವೆಲ್ಲರೂ ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದೆವು. 2024 ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ದಿನಗೂಲಿ ನೌಕರರನ್ನು ಖಾರ್ಯ ಮಾಡಬೇಕಾಗುತ್ತದೆನ್ನುವ ಕಾರಣದಿಂದ ಹಾಸ್ಟಲ್ ದಿನಗೂಲಿ ನೌಕರರ ಸೇವೆಯನ್ನು ಹೊರಗುತ್ತಿಗೆ ಏಜೆನ್ಸಿಗಳ ಪಾದಕ್ಕೆ ಅರ್ಪಿಸಿತು. ರಾಜ್ಯದ ಎಲ್ಲಾ ಹೊರಗುತ್ತಿಗೆ ಏಜೆನ್ಸಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ರಾಜ್ಯದ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ಸಂಬಂಧಿಕರು ಮತ್ತು ವಿಶ್ವಾಸಿಗರ ಹೆಸರಿನಲ್ಲಿವೆ. ವರ್ಷಪೂರ್ತಿ ಕೆಲಸ ಮಾಡಿದರೂ 7-8 ತಿಂಗಳ ವೇತನದ ಚೆಕ್ ನೀಡಿ ಶೋಷಿಸಲಾಗುತ್ತಿದೆ. ನಮ್ಮ ವೇತನ ಪಡೆಯಲು ನಾವು ಲಂಚ ಕೊಡಬೇಕಾದ ಪರಿಸ್ಥಿಯಿದೆ. ಆದಕಾರಣ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ವೇತನ ಪಾವತಿ ನಿಯಮವನ್ನು ಬದಲಿಸಿ ಬೀದರ್ ಜಿಲ್ಲೆಯ ಮಾದರಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹೊರಗುತ್ತಿಗೆ ನೌಕರರ ಸಹಕಾರ ಸಂಘದ ಮೂಲಕ ವೇತನ ಬಟವಾಡೆ ಮಾಡುವಂತೆ ಆಗ್ರಹಿಸಿದರು.

ಹಾಸ್ಟಲ್ ಗಳಲ್ಲಿ ಇದ್ದು ಕಲಿಯುತ್ತಿರುವ ಕಡು ಬಡವರ ಮಕ್ಕಳ ಸೇವೆ ಮಾಡುವ ಸೌಭಾಗ್ಯ ನಮ್ಮದಾಗಿದೆ. ಆದರೂ ನಾವು ಸೇವಾ ಅಭದ್ರತೆಗೆ ಒಳಗಾಗಿದ್ದೇವೆ. ಮೇಲಧಿಕಾರಿಗಳು ನೀಡಿದ ಆಹಾರ ಸಾಮಗ್ರಿಗಳನ್ನು ಬಳಸಿ ನಾವು ಮಕ್ಕಳಿಗೆ ಆಹಾರ ತಯಾರಿಸುತ್ತೇವೆ. ಆದರೆ ಆಹಾರ ತಯಾರಿಕೆಯಲ್ಲಿನ ಲೋಪದೋಷಗಳನ್ನು ನಮ್ಮ ಮೇಲೆ ಹಾಕಿ ಕಳಪೆ ಆಹಾರ ಸಾಮಗ್ರಿ ನೀಡಿದ ಮೇಲಧಿಕಾರಿಗಳು ತಪ್ಪಿಸಿಕೊಳ್ಳುತ್ತಾರೆ. ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಬೇಕು.
ನೋಟೀಸ್ ನೀಡಿ ವಿಚಾರಣೆ ನಡೆಸದೆ, ಯಾವುದೇ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ತೆಗೆಯುವಂತಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಒಂದು ವಿಚರಣಾ ಸಮಿತಿಯನ್ನು ರಚಿಸಿದ್ದು, ವಸತಿ ನಿಲಯಗಳ ಹೊರಗುತ್ತಿಗೆ ನೌಕರರು ಭಯಪಡಬಾರದು. ನಿರಂತರ ಹೋರಾಟದಿಂದ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಲಿದ್ದು, ನೌಕರರು ಸಂಘದ ಹೋರಾಟಕ್ಕೆ ಶಕ್ತಿ ತುಂಬುವಂತೆ ಹನುಮೇಗೌಡ ಮನವಿ ಮಾಡಿದರು.

ನೌಕರರ ಆಕ್ರೋಶ: ಇದೂವರೆವಿಗೂ ಹೊರಗುತ್ತಿಗೆ ನೌಕರರಿಗೆ ವೇತನ ನೀಡುತ್ತಿರುವ ಶಿವಮೊಗ್ಗದ ಅಖಿಲ ಎಂಟರ್ ಪೈಸಸ್ ಏಜೆನ್ಸಿಯವರು ಜನವರಿ ತಿಂಗಳಲ್ಲಿ ನೌಕರರ ನೇಮಕಾತಿಗಾಗಿ ಟೆಂಡರ್ ಪಡೆದಿದ್ದು ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ವರ್ತಿಸುತ್ತಿದ್ದು, ಏಜನ್ಸಿ ಪಡೆದು ನಾಲ್ಕು ತಿಂಗಳು ಕಳೆದಿದ್ದರೂ ನೇಮಕಾತಿ ಆದೇಶ ಪತ್ರ, ಇ.ಎಸ್.ಐ, ಪಿ.ಎಫ್ ದಾಖಲಾತಿ ಪತ್ರಗಳನ್ನು ನೌಕರರಿಗೆ ನೀಡದೇ ಅನಗತ್ಯ ವಿಳಂಬ ಮಾಡುತ್ತಿದ್ದು, ಈ ಕೂಡಲೇ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ವಹಿಸಿಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್, ನಿಲಯ ಪಾಲಕ ಪ್ರದೀಪ್, ತಾಲೂಕು ಘಟಕದ ಅಧ್ಯಕ್ಷೆ ರುಕ್ಮಿಣಿಯಮ್ಮ, ಲಲಿತಾ, ಸುಂದರಮ್ಮ ಸೇರಿದಂತೆ ತಾಲೂಕು ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮೊರಾರ್ಜಿ ವಸತಿ ಶಾಲೆ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಹಾಸ್ಟೆಲ್ ಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಹೊರಗುತ್ತಿಗೆ ನೌಕರರು ಸಭೆಯಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.