ಧರ್ಮಸ್ಥಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನ ಬಳಕೆ, ಸುರಕ್ಷತೆ, ಬದ್ಧತೆ, ಬ್ಯಾಂಕ್ ಮೂಲಕ ನಡೆಸುವ ವ್ಯವಹಾರಗಳ ದಾಖಲಾತಿ ನಿರ್ವಹಣೆ, ಕಾರ್ಯಕರ್ತರ ಕಾರ್ಯಕುಶಲತೆ, ವರದಿಗಳ ತಯಾರಿ ಮತ್ತು ಬಳಕೆ, ವ್ಯವಹಾರದಲ್ಲಿ ನೈಪುಣ್ಯತೆ ಮೊದಲಾದ 114 ಅಂಶಗಳಲ್ಲಿ 109 ಪ್ರಮುಖ ಅಂಶಗಳನ್ನು ಗಮನಿಸಿದ ಲಂಡನ್ನಿನ ಎನ್.ಕ್ಯೂ.ಎ.ಗ್ರಾಮಾಭಿವೃದ್ಧಿ ಯೋಜನೆಗೆ ಕೊಡಮಾಡಿದ ಐಎಸ್‌ಒ 27001-2013ನ್ನು ಮೇಲ್ದರ್ಜೆಗೇರಿಸಿದೆ.
ಸದರಿ ಐಎಸ್‌ಒ ಸಂಸ್ಥೆಯಲ್ಲಿ ಸುಮಾರು 170 ದೇಶಗಳು ಸದಸ್ಯತ್ವ ಹೊಂದಿವೆ. ಎನ್‌ಕ್ಯೂಎ ಸಂಸ್ಥೆ 90 ದೇಶಗಳ ಪ್ರತಿಷ್ಠಿತ ಸಂಸ್ಥೆಗಳನ್ನು ಐಎಸ್‌ಗಾಗಿ ಆಡಿಟ್ ಮಾಡುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯನ್ನು 38 ನಿಯಮಗಳು ಮತ್ತು 93ರಲ್ಲಿ 90 ಅಂಶಗಳ ಕುರಿತು ಸೂಕ್ಷ್ಮವಾಗಿ ಗಮನಿಸಿ ಈ ಹಿಂದೆ ನೀಡಲಾದ ಐಎಸ್‌ಒ ಅನ್ನು ಇದೀಗ 27001-2022 ಆಗಿ ಮೇಲ್ದರ್ಜೆಗೇರಿಸಿದೆ.

ಎನ್.ಕ್ಯೂ.ಎ.ಸಂಸ್ಥೆಯ ಜಿ.ಎಸ್.ಭಾರ್ಗವ್ ಅವರು ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾವಂದರಾದ ಡಾ.ಡಿ.ವೀರೇಂದ್ರಹೆಗ್ಗಡೆಯವರಿಗೆ ಪ್ರಮಾಣಪತ್ರ ಹಸ್ತಾಂತರಿಸಿ ಶುಭ ಹಾರೈಸಿದರು.ಭಾರತ ದೇಶದಲ್ಲಿಯೇ ಐಎಸ್‌ಒ 27001-2022 ಪ್ರಮಾಣಪತ್ರ ಪಡೆದ ಚಾರಿಟೆಬಲ್ ಟ್ರಸ್ಟ್ ಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೊದಲಿಗೆ ಸಂಸ್ಥೆಯಾಗಿದೆ.
ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳ ನಿರ್ವಹಣೆಯ ಅತ್ಯುತ್ತಮ ಗುಣಮಟ್ಟದ ತಂತ್ರಜ್ಞಾನ, ಪಾರದರ್ಶಕತೆ, ಲೆಕ್ಕಾಚಾರಗಳು, ನಿಯಮಪಾಲನೆ ಮುಂತಾದ ಅನೇಕ ಪ್ರಮುಖ ವಿಷಯಗಳಲ್ಲಿ ವಿಶ್ವದರ್ಜೆಯ ಗುಣಮಟ್ಟವನ್ನು ಹೊಂದಿರುವುದಕ್ಕೆ ಈ ಪ್ರಮಾಣಪತ್ರ ಸಾಕ್ಷಿಯಾಗಿದೆ.

ಬ್ಯಾಂಕ್‌ಗಳ ವ್ಯವಹಾರಗಳ ಪಾರದರ್ಶಕತೆ, ನಿಖರತೆಯ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ಬ್ಯಾಂಕ್‌ಗಳಿಗೆ ಐಎಸ್‌ಒ 27001 ಮಾನ್ಯತೆ ಪಡೆಯಲೇಬೇಕೆಂದು ನಿರ್ದೇಶಿಸಿದೆ. ಬ್ಯಾಂಕ್‌ನ ಸೇವೆಗಳನ್ನು ಬ್ಯಾಂಕ್‌ನ ಬಿಸಿನೆಸ್ ಕರೆಸ್ಪಾಂಡೆಂಟ್ ಮೂಲಕ ಸ್ವಸಹಾಯ ಸಂಘ ವ್ಯವಸ್ಥೆಯಲ್ಲಿ ಗ್ರಾಮ ಗ್ರಾಮಗಳಲ್ಲಿ ತರುತ್ತಿರುವ ಗ್ರಾಮಾಭಿವೃದ್ಧಿ ಯೋಜನೆ ಸ್ವಯಂಪ್ರೇರಿತವಾಗಿ ತನ್ನ ಸಂಸ್ಥೆಯನ್ನು ಈ ಉತ್ಕೃಷ್ಟ ಆಡಿಟ್‌ಗೆ ಒಳಪಡಿಸಿ ಈ ಪ್ರಮಾಣಪತ್ರ ಪಡೆದುಕೊಂಡಿದೆ.

ಈ ಸಂದರ್ಭದಲ್ಲಿ ಪೂಜ್ಯ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಹೇಮಾವತಿಹೆಗ್ಗಡೆ, ಶ್ರದ್ಧಾ ಅಮಿತ್, ಎಸ್.ಎಸ್.ಅನಿಲ್ ಕುಮಾರ್,ಇತರರು ಉಪಸ್ಥಿತರಿದ್ದರು.
ವಿಶೇಷ ವರದಿ: ಕೆ.ಬಿ.ಚಂದ್ರಚೂಡ