ಧರ್ಮಸ್ಥಳ:ಭವ್ಯ,ದಿವ್ಯ ಇತಿಹಾಸದೊಂದಿಗೆ ಪರಂಪರಾಗತವಾಗಿ ಬಂದ ಮೌಲ್ಯಗಳನ್ನು ಬಹಳ ಅಚ್ಚುಕಟ್ಟಾಗಿ ಅಳವಡಿಸಿಕೊಂಡು ಬರುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಅನುಕೂಲಕ್ಕಾಗಿ ಉಪ ರಾಷ್ಟ್ರಪತಿ ಶ್ರೀ ಜಗದೀಪ್ ಧನ್‌ಕರ್ ಅವರಿಂದ ಮಂಗಳವಾರ ನೂತನ ಕ್ಯೂ ಕಾಂಪ್ಲೆಕ್ಸ್ ‘ಶ್ರೀ ಸಾನ್ನಿಧ್ಯ’ ಲೋಕಾರ್ಪಣೆ ಗೊಂಡಿತು.
ನoತರ ಮಾತನಾಡಿದ ಉಪರಾಷ್ಟ್ರಪತಿಗಳು ಭಕ್ತರಿಗೆ ಸುಸಜ್ಜಿತ ಸೌಕರ್ಯವುಳ್ಳ ಸರತಿ ಸಾಲಿನ ವ್ಯವಸ್ಥೆಯನ್ನು ಜಾರಿಗೊಳಿಸಿದ ವೀರೇಂದ್ರಹೆಗ್ಗಡೆರವರು ಭಕ್ತರು ಆರಾಮದಾಯಕವಾಗಿ ಸ್ವಾಮಿಯ ದರ್ಶನ ಮಾಡಲಿ ಎಂದು ಮಾಡಿದ್ದಾರೆ,ಇದರಲ್ಲಿ ಆರಾಮದಾಯಕ ಆಸನದ ವ್ಯವಸ್ಥೆ,ಉಪಹಾರ,ಕುಡಿಯುವ ನೀರು, ವೃದ್ಧರು, ಅಂಗವಿಕಲರಿಗೆ, ಮಕ್ಕಳ ಆರೈಕೆ ಕೇಂದ್ರ,ವೈದ್ಯಕೀಯ ನೆರವು,ಟಿವಿ ಸಹಿತ ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ ಮಾಡಿರುವುದು ಧರ್ಮಸ್ಥಳದ ವಿಶೇಷತೆ ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆ ರವರು 1968ರ ತನಕ ಕ್ಷೇತ್ರದಲ್ಲಿ ಬರುವ ಭಕ್ತರ ಸಂಖ್ಯೆ ಬಹಳ ವಿರಳವಿತ್ತು. 1970ರಲ್ಲಿ ದೇವರ ದರ್ಶನ ಬೆಳಗ್ಗೆ 7ರಿಂದ 8, ಅಭಿಷೇಕ ಸಲ್ಲಿಸುವವರಿಗೆ 9ರಿಂದ 11, ನೈವೇದ್ಯ ಸಮಯ 11ರಿಂದ 12, 12ರಿಂದ 1 ಗಂಟೆವರೆಗೆ ದರ್ಶನ ಹಾಗೂ ಮಹಾಪೂಜೆ ನಡೆದು ಬಳಿಕ ಸಂಜೆ 6ಕ್ಕೆ ದೇವಳದ ಬಾಗಿಲು ತೆರೆಯಲಾಗುತ್ತಿತ್ತು.
ರಾತ್ರಿ 8ಕ್ಕೆ ಮಹಾಪೂಜೆ ನಡೆಯುತ್ತಿತ್ತು. ಈ ಸಮಯ ಕ್ಯೂ ವ್ಯವಸ್ಥೆ ಇರಲಿಲ್ಲ. ಜನರು ದೇವಾಲಯದೊಳಗೆ ನಿಲ್ಲುತ್ತಿದ್ದರು.1972ರ ಬಳಿಕ ದೇವಸ್ಥಾನದೊಳಗೆ ಸರದಿ ವ್ಯವಸ್ಥೆ ಮಾಡಲಾಯಿತು. 1980ರಲ್ಲಿ ಹೊರಗೆ ಸರದಿ ವ್ಯವಸ್ಥೆ ಆರಂಭವಾಯಿತು. 1994ರಲ್ಲಿ ದೇಗುಲ ದರ್ಶನ ಸಮಯದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿ ಬೆಳಗ್ಗೆ 6ರಿಂದ 11.15ರವರೆಗೆ ನಿರಂತರ ದರ್ಶನ ನೈವೇದ್ಯದ ಬಳಿಕ ಮಧ್ಯಾಹ್ನ 2 ಗಂಟೆವರೆಗೆ, ಬಳಿಕ ಸಂಜೆ, ರಾತ್ರಿಯೂ ದರ್ಶನ ವ್ಯವಸ್ಥೆ ಮುಂದುವರಿಯಿತು. ಇದೀಗ ಶ್ರೀ ಸಾನಿಧ್ಯಕ್ಕೂ ಕಾಂಪ್ಲೆಕ್ಸ್ ಮೂಲಕ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.ಭಕ್ತರು ದೇವಸ್ಥಾನದ ಸುತ್ತ 600 ಮೀ ಮಾತ್ರ ನಡೆದರೆ ಸಾಕು.ಹೊಸ ಕ್ಯೂ ಕಾಂಪ್ಲೆಕ್ಸ್ನಲ್ಲಿ ಭಕ್ತರಿಗೆ ಬೇಕಾದ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲಗಳನ್ನು ನೀಡುತ್ತಿದ್ದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಯಾವುದೇ ಒತ್ತಡಗಳಲ್ಲದೆ ಪೂರ್ಣಗೊಳ್ಳಲು ಸಹಕಾರಿಯಾಗಿದೆ.10 ಸಾವಿರ ಆಸನಗಳ ವ್ಯವಸ್ಥೆಯುಳ್ಳ ಶ್ರೀ ಸಾನ್ನಿಧ್ಯ ಲೋಕಾರ್ಪಣೆಗೊಂಡಿರುವುದು ಸಂತಸ ತಂದಿದೆ ಎಂದರು.
ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣವನ್ನು ಬಲಪಡಿಸುವ ಗುರಿಯಾಗಿದೆ,ಶಿಕ್ಷಕರು,ಅಗತ್ಯ ಮೂಲಭೂತ ಸೌಕರ್ಯಗಳು ಆಟದ ಮೈದಾನ,ಶೌಚಗೃಹ,ಇತರೆ ಅಗತ್ಯ ಸೌಕರ್ಯಗಳನ್ನು ನೀಡಲು ಈ ಕಾರ್ಯಕ್ರಮ ವನ್ನು ರಾಜ್ಯಾದ್ಯಂತ ಆರಂಭಿಸಲಾಗಿದೆ ಎಂದು ಖಾವಂದರು ತಿಳಿಸಿದರು.ಶೈಕ್ಷಣಿಕ ಸಾಧಕರಿಗೆ ಉಪರಾಷ್ಟ್ರಪತಿಗಳು ಸುಜ್ಞಾನ ನಿಧಿ ನೀಡಿ ಗೌರವಿಸಿದರು.
ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿಹೆಗ್ಗಡೆ,ಡಾ||ಸುದೇಶ್ ಧನಕರ್,ಡಿ.ಹರ್ಷೇಂದ್ರ ಕುಮಾರ್, ಡಿ.ಸುರೇoದ್ರಕುಮಾರ್, ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾದ ಅನಿಲ್ ಕುಮಾರ್. ಎಸ್. ಎಸ್. ಮುಂತಾದವರು ಉಪಸ್ಥಿತರಿದ್ದರು.
ನೂತನ ಕ್ಯೂ ಕಾಂಪ್ಲೆಕ್ಸ್ ವಿಶೇಷತೆಗಳು
ದೇಗುಲದ ಒಂದು ಭಾಗದಲ್ಲಿ ನಿರ್ಮಾಣಗೊಂಡಿರುವ ನೂತನ ಸರದಿ ಸಾಲಿನ ಈ ಸಂಕೀರ್ಣ 2,75,177 ಚದರಡಿಯಲ್ಲಿ ವೃತ್ತಾಕಾರವಾಗಿ ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತ ಸರತಿ ನಿಲ್ಲುತ್ತಿದ್ದ ಭಕ್ತರು ಇನ್ನು ಮುಂದೆ ಶ್ರೀ ಸಾನ್ನಿಧ್ಯದ ಮೂಲಕ ಆರಾಮವಾಗಿ ತೆರಳಿ ನೆಮ್ಮದಿಯಾಗಿ ಶ್ರೀ ಮಂಜುನಾಥನ ದರ್ಶನ ಪಡೆಯಬಹುದಾಗಿದೆ.
16 ವಿಶಾಲ ಭವನವಿದ್ದು, ಪ್ರತಿ ಭವನದಲ್ಲಿ 600ರಿಂದ800 ಜನರಿಗೆ ಅವಕಾಶವಿದೆ. ಏಕಕಾಲಕ್ಕೆ 10ರಿಂದ 12ಸಾವಿರ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. 150ಕ್ಕೂ ಅಧಿಕ ಕ್ಯಾಮೆರಾ ಅಳವಡಿಸಲಾಗಿದೆ. ನಿಖರವಾಗಿ ಜನರ ಎಣಿಕೆ, ಯಾವ ವ್ಯಕ್ತಿ ಎಲ್ಲಿರುವನೆಂದು ಸುಲಭದಲ್ಲಿ ಪತ್ತೆ ಹಚ್ಚಬಹುದಾಗಿದೆ. ಪ್ರತಿ ಹಂತದಲ್ಲೂ ದಕ್ಷತೆ ಮತ್ತು ನಾವೀನ್ಯತೆ ಎದ್ದು ಕಾಣುತ್ತಿದೆ. ಕ್ಯೂ ಕಾಂಪ್ಲೆಕ್ಸ್ ನ ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗಾಗಿ 650 ಕಿಲೋ ವ್ಯಾಟ್ ಸೌರ ವಿದ್ಯುತ್ ಘಟಕ ಅಳವಡಿಸಲಾಗಿದೆ ಇದೊಂದು ವಿಶೇಷ ವ್ಯವಸ್ಥೆಯಾಗಿದೆ.
ವಿಶೇಷ ವರದಿ:ಕೆ.ಬಿ.ಚಂದ್ರಚೂಡ