ಅರಕಲಗೂಡು – ತಾಲೂಕು ರೈತರ ಬೆಳೆ ರಕ್ಷಿಸಿ ಕಾಡಾನೆಗಳ ಹಾವಳಿ ನಿಯಂತ್ರಿಸುವ ಉದ್ದೇಶದಿಂದ ತಾಲೂಕಿನಲ್ಲಿ ರೈಲ್ವೆ ಬ್ಯಾರಿಕೇಡ್ ಸ್ಥಾಪನೆಗೆ 18 ಕೋಟಿ ರೂ ಅನುದಾಮ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ದಿವಾಕರಗೌಡ ತಿಳಿಸಿದರು.
ತಾಲೂಕಿನ ರಾಮನಾಥಪುರದಲ್ಲಿ ಮಂಗಳವಾರ ವಿವಿಧ ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾಡಾನೆಗಳ ಉಪಳದಿಂದ ರೈತರು ಬೆಳೆದ ಬೆಳೆಗಳನ್ನು ಕೈಗೆ ತೆಗೆದುಕೊಳ್ಳದಂತಾಗಿದೆ. ಕಳೆದ ವಾರ ನೆಲಬಳ್ಳಿಯಲ್ಲಿ ವಿದ್ಯುತ್ ಶಾಕ್ ತಗುಲಿ ಕಾಡಾನೆ ಮೃತಪಟ್ಟಿದೆ, ಅವುಗಳಿಗೂ ಬದುಕು ಹಕ್ಕಿದೆ, ಆದರೆ ರೈತರ ಬೆಳೆಗಳನ್ನು ಉಳಿಸಿಕೊಳ್ಳಲು ಕಾಡಾನೆಗಳಿಗೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೆಡ್ ನಿರ್ಮಾಣ ಮಾಡಲು ದೊಡ್ಡ ಮೊತ್ತದ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದ್ದು ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.
ರೈತರು ನೀರಾವರಿ ಸೌಲಭ್ಯದಿಂದ ವಂಚಿತರಾಗದಂತೆ ಹಳ್ಳಿಮೈಸೂರು ಹೋಬಳಿ ರಂಗೇನಹಳ್ಳಿ ಹಾಗೂ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸಿದ್ದರಾಮಯ್ಯ ಅವರ ಬಳಿ ರೈತರ ನಿಯೋಗ ಕೊಂಡೊಯ್ದು ಮನವಿ ಮಾಡಿದೆ. ಈಗ 70 ಕೋಟಿ ರೂ ಮಂಜೂರಾಗಿದ್ದು ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿದೆ. ಶಂಭುನಾಥಪುರದಲ್ಲಿ ಸ್ಮಶಾನ ಜಾಗಕ್ಕೆ 70 ಲಕ್ಷ ರೂ ಅನುದಾನ ಕೊಡಲಾಗಿದ್ದು, ಹಳ್ಳಿಮೈಸೂರು ಹೋಬಳಿಯಲ್ಲಿ ರಸ್ತೆ ದುರಸ್ತಿಗೆ 7.50 ಕೋಟಿ ರೂ ಮಂಜೂರು ಮಾಡಿಸಲಾಗಿದೆ. ಕಾಲನಿಗಳ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ , ರಾಮನಾಥಪುರದಲ್ಲಿ ರಸ್ತೆ ಅಭಿವೃದ್ಧಿಗೆ ಒಂದು ಕೋಟಿ ರೂ ಹಾಗೂ ಕೊಣನೂರು ಸರ್ಕಾರಿ ಆಸ್ಪತ್ರೆಗೆ 1 ಕೋಟಿ ರೂ ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಹಳ್ಳಿಮೈಸೂರು ಮತ್ತು ರಾಮನಾಥಪುರ ಹೋಬಳಿ ಕೇಂದ್ರದಲ್ಲಿ ರಾಗಿ ಖರೀದಿ ಕೇಂದ್ರ ತೆರೆದು ರೈತರಿಗೆ ನೀಡಿದ ಭರವಸೆ ಈಡೇರಿಸಲಾಗಿದೆ. ಇದಕ್ಕಾಗಿ ನನಗಿಂತ ಸಿದ್ದರಾಮಯ್ಯ ಅವರನ್ನು ನೆನಪು ಮಾಡಿಕೊಳ್ಳಬೇಕು. ಜನಸೇವೆ ಮಾಡಲು ಅಧಿಕಾರ ಬೇಕೆಂದೇನು ಇಲ್ಲ, ಅಧಿಕಾರ ಇಲ್ಲದಿದ್ದರೂ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ತರಲು ಶ್ರಮಿಸುತ್ತಿರುವೆ. ಆದರೆ ಕೆಲವು ಕಾಲೆಳೆಯುವುದನ್ನು ನಿಲ್ಲಿಸಿ ಜನರ ಒಳಿತಿಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಕೈ ಜೋಡಿಸಬೇಕು ಎಂದರು.

ಜಿಪಂ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಮಾತನಾಡಿ, ಕಳೆದ 30 ವರ್ಷಗಳಿಂದ ಅಧಿಕಾರ ಅನುಭವಿಸಿದ ಹಾಲಿ ಮತ್ತು ಮಾಜಿ ಶಾಸಕರಿಗೆ ರೈತರ ಮೇಲೆ ಕಿಂಚಿತ್ತೂ ಕಾಳಜಿ ಇಲ್ಲ, ಚುನಾವಣೆ ಸಮಯದಲ್ಲಿ ಹುಸಿ ಭರವಸೆಗಳನ್ನು ನೀಡಿ ಮುಗ್ಧ ಮತದಾರರನ್ನು ವಂಚಿಸಿ ಜನರ ಕಣ್ಣಿಗೆ ಮಂಕುಬೂದಿ ಎರಚಿ ಅನ್ಯಾಯ ಮಾಡಿದ್ದಾರೆ. ದಿವಾಕರ್ ಗೌಡ ಅವರು ಇಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲು ಶ್ರಮಿಸಿರುವುದು ಸ್ವಾಗತಾರ್ಹ. ರೈತರ ಕಷ್ಟಕ್ಕಾಗುವ ರಾಜಕಾರಣಿ ಕೈ ಬಲಪಡಿಸಿದರೆ ಕ್ಷೇತ್ರ ಉದ್ದಾರವಾಗಲಿದೆ ಎಂದು ಹೇಳಿದರು.
ರೈತ ಮುಖಂಡ ಮಣಿ ಮಲ್ಲೇಶ್ ಮಾತನಾಡಿ, ಇಲ್ಲಿ ರಾಗಿ ಖರೀದಿ ಕೇಂದ್ರ ಆರಂಭವಾಗುವ ಮುಂಚೆ ದಲ್ಲಾಳಿಗಳು ಹಳ್ಳಿಗಳಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಬೇಕಾಬಿಟ್ಟಿ ದರದಲ್ಲಿ ರಾಗಿ ಕೊಂಡು ವಂಚಿಸುತ್ತಿದ್ದರು. ಈಗ ದಲ್ಲಾಳಿಗಳ ದಂದೆ ತಪ್ಪಿದೆ ಎಂದರು.
ಈ ವೇಳೆ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಡಾ. ರಾಘವೇಂದ್ರಗೌಡ, ಮುಖಂಡರಾದ ಬಿ.ಜೆ. ರಾಮೇಗೌಡ, ರೈತ ಸಂಘದ ಮುಖಂಡರಾದ ಲೋಕೇಶ್, ಪುಟ್ಟರಾಜು, ಅವಿನಾಶ್, ಕೃಷ್ಣೇಗೌಡ, ಮಂಜು, ನಟರಾಜು, ರಾಜೇಶ್, ಕರೀಗೌಡ, ಗೋವಿಂದರಾಜು, ಯೋಗಣ್ಣ ಇತರರಿದ್ದರು.

ಇದಕ್ಕೂ ಮುನ್ನ ರಾಮನಾಥಪುರ ರಾಗಿ ಖರೀದಿ ಕೇಂದ್ರ ಮುಂಭಾಗ ರೈತ ಸಂಘದ ಮುಖಂಡರು ದಿವಾಕರಗೌಡ ಅವರಿಗೆ ಹೂ ಮಳೆ ಸುರಿಸಿ ಜೆಸಿಬಿ ಮೂಲಕ ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಸ್ವಾಗತಿಸಿದರು.