ಕೊರಟಗೆರೆ-ಅಭಿವೃದ್ಧಿ-ಕಾಮಗಾರಿಗಳ-ಕುಂಠಿತಕ್ಕೆ ಜಿಲ್ಲೆಯ ಅಧಿಕಾರಿಗಳೇ-ಪರೋಕ್ಷ ಕಾರಣ-ಆರೋಪ

ಕೊರಟಗೆರೆ:- ಕೊರಟಗೆರೆ ಪಟ್ಟಣದ ಅನೇಕ ಜನಪರ ಕೆಲಸಗಳ ವಿಳಂಬಕ್ಕೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಕುಂಠಿತಕ್ಕೆ ಜಿಲ್ಲೆಯ ಅಧಿಕಾರಿಗಳೇ ಪರೋಕ್ಷ ಕಾರಣ ಎಂದು ಪಟ್ಟಣ ಪಂಚಾಯಿತಿಯ ಹಲವು ಸದಸ್ಯರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪಟ್ಟಣಪಂಚಾಯತಿ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯತಿ ಹಲವು ಕಾಮಗಾರಿಗಳ ವಿಳಂಬಕ್ಕೆ ಜಿಲ್ಲಾ ಯೋಜನಾ ನಿರ್ದೇಶಕರೇ ಕಾರಣರಾಗಿದ್ದಾರೆ ಅವರು ಪಟ್ಟಣಪಂಚಾಯತಿಗೆ ಬಂದು ಹೇಳುವುದೇ ಒಂದು ಅವರ ಕಛೇರಿಯಲ್ಲಿ ಮಾಡುವುದೇ ಒಂದಾಗಿದೆ ಕೆಲವು ಭಾರಿ ಉಡುಫೆ ಮಾತನಾಡುತ್ತಾರೆ ಇವರ ಜೊತೆಗೆ ಜಿಲ್ಲಾಧಿಕಾರಿಗಳು ನಮ್ಮಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಇದರಿಂದ ಪಟ್ಟಣದ ಅನೇಕ ಸಮಸ್ಯೆಗಳು ಹಾಗೆಯೇ ಉಳಿದಿವೆ ಒಕ್ಕೊರಳವಾಗಿ ಅಸಮಾಧಾನ ಹೊರಹಾಕಿದರು.

ಪಟ್ಟಣ ಪಂಚಾಯತಿ ಸದಸ್ಯ ಕೆ.ಆರ್.ಓಬಳರಾಜು ಮಾತನಾಡಿ ಪಟ್ಟಣದಲ್ಲಿ ಪರಿಶಿಷ್ಟ ಜಾತಿಯವರ ಅನುಧಾನದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಗಳು ಕಟ್ಟಿ 6 ವರ್ಷಗಳಾದರೂ ಹರಾಜು ಹಾಗಿಲ್ಲ, ಈ ಸಂಬಂಧ ಹಲವು ಸಭೆಯಲ್ಲಿ ವಿಷಯ ಮಂಡನೆ ಮಾಡಿ ಕಡತಗಳನ್ನು ಕಳಿಸಿದರು ಜಿಲ್ಲೆಯ ಯೋಜನಾ ನಿರ್ದೇಶಕರು ನಿರ್ಲಕ್ಷ ವಹಿಸಿದ್ದಾರೆ, ಈ ಸಂಬಂಧ ಪೌರಾಡಳಿತ ಇಲಾಖೆಗೆ ಕಳುಹಿಸಿರುವ ಕಡತಕ್ಕೆ ಬೆಲೆಯಿಲ್ಲ ಇನ್ನು ಅಧಿಕಾರಿಗಳನ್ನು ಕಾದರೆ ಆಗುವುದಿಲ್ಲ ಮುಖ್ಯಾಧಿಕಾರಿಗಳು ಘಟನ್ನೋತ್ತರ ವರದಿ ಮೇರೆಗೆ ಅವುಗಳನ್ನು ಹರಾಜು ಮಾಡುವಂತೆ ಒತ್ತಾಯಿಸಿದರು, ಎಲ್ಲಾ ಸದಸ್ಯರ ಅಗ್ರಹದಂತೆ ಫೆಬ್ರವರಿ 15 ಕ್ಕೆ ಅಂಗಡಿಗಳನ್ನು ಹರಾಜು ಮಾಡುವ ನಿರ್ಣಯ ಕೈಗೊಳ್ಳಲಾಯಿತು.

ಸದಸ್ಯ ಕೆ.ಎನ್. ಲಕ್ಷ್ಮಿನಾರಾಯಣ್ ಮಾತನಾಡಿ ಪಟ್ಟಣ ಪಂಚಾಯತಿಯಿಂದ ಪೌರಕಾರ್ಮಿಕರಿಗೆ 14 ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟು 6 ವರ್ಷಗಳಾಗಿ ಅವರಿಗೆ ಇಲ್ಲಿಯವರೆಗೆ ಮನೆ ನೀಡದೆ ಅವು ಹಾಳಾಗುತ್ತಿವೆ, ರಾಜ್ಯ ಸರ್ಕಾರದ 6 ಲಕ್ಷ ಹಣ ಬಂದಿದೆ ಆದರೆ ಕೆಂದ್ರ ಸರ್ಕಾರದ 1.50 ಲಕ್ಷ ರೂಗಳು ಬರಲಿಲ್ಲ ಆ ವಂತಿಕೆ ಬರುವುದು ಅನುಮಾನವಾಗಿದೆ. ಆದರಿಂದ ಕೇಂದ್ರ ಹಣ ಕಾದು ಕುಳಿತರೆ ಆಗುವುದಿಲ್ಲ ಪಟ್ಟಣ ಪಂಚಾಯತಿಯ ಹಣದಲ್ಲಿ ಪೌರಕಾರ್ಮಿಕರ ಕೇಂದ್ರ ಸರ್ಕಾರದ ವಂತಿಕೆ ನೀಡಿ ಮೂಲಭೂತ ಸೌಕರ್ಯ ಒದಗಿಸಿ ಅವರಿಗೆ ಮನೆ ನೀಡುವಂತೆ ಒತ್ತಾಯಿಸಿದರು, ಇದಕ್ಕೆ ಸಭೆಯಲ್ಲಿ ಎಲ್ಲರೂ ಒಪ್ಪಿ ನಿರ್ಣಯ ಕೈಗೊಂಡರು.

ಸದಸ್ಯ ನಂದೀಶ್ ಮಾತನಾಡಿ ಕೊರಟಗೆರ ಪಟ್ಟಣದಲ್ಲಿ ಸ್ಲಂ ಬೋರ್ಡ್ ನವರು ಮಾಡಿರುವ ಅವಾಂತರ ಹೇಳತೀರದಾಗಿದೆ. ಪಟ್ಟಣದ 44 ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿ, ವಂತಿಕೆ ಕಟ್ಟಿಸಿಕೊಂಡು ವರ್ಷಗಳಾದರೂ ಅವರಿಗೆ ಮನೆ ಕಟ್ಟಿಕೊಟ್ಟಿಲ್ಲ ಪಟ್ಟಣದ ಕಾಮೇನಹಳ್ಳಿ ಆಶ್ರಯ ಮನೆಗಳ ನಿವೇಶನಗಳಲ್ಲಿ ನಿರ್ಮಿಸುವ ಸ್ಲಂ ಬೋರ್ಡ್ ಮನೆಗಳ ಪರಿಸ್ಥಿತಿ ಹೀಗೆ ಹಾಗಿದೆ ಜಿಲ್ಲಾಧಿಕಾರಿಗಳು ಬಂದು ಸ್ಥಳ ಪರಿಶೀಲನೆ ಮಾಡಿದರೂ ಪ್ರಯೋಜನವಾಗಲಿಲ್ಲ ಸ್ಲಂ ಬೋರ್ಡ್ ಅಧಿಕಾರಿಗಳ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸದಸ್ಯ ನಟರಾಜು ಮಾತನಾಡಿ ಕೊರಟಗೆರೆ ಪಟ್ಟಣದ ಮಟನ್ ಮಾರ್ಕೆಟ್ ವೃತ್ತ, ಪೋಸ್ಟ್ ಆಫೀಸ್, ಪಶು ಆಸ್ಪತ್ರೆ ಮುಂಭಾಗ ಸೇರಿದಂತೆ ಪಟ್ಟಣದ ಹಲವು ಕಡೆ ಕೋಳಿ ಮತ್ತು ಮಟನ್ ಅಂಗಡಿ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ದುರ್ವಾಸನೆ ಉಂಟಾಗಿ ಓಡಾಡಲು ಆಗುತ್ತಿಲ್ಲ, ಇದರಿಂದ ಆರೋಗ್ಯ ಸಮಸ್ಯೆ ಜನರಲ್ಲಿ ಹೆಚ್ಚಾಗುತ್ತಿದೆ ಕೂಡಲೇ ಪಟ್ಟಣದ ಎಲ್ಲಾ ಮಾಂಸದ ಅಂಗಡಿಗಳನ್ನು ಊರಿನ ಪಕ್ಕದಲ್ಲಿ ಒಂದೆಡೆಗೆ ಸಾಗಿಸುವಂತೆ ಒತ್ತಾಯಿಸಿದರು.

ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ ಪಟ್ಟಣದ ಗಂಗಾಧರೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಅನಧಿಕೃತ ಹಂದಿಗೂಡುಗಳು ಪಟ್ಟಣ ಪಂಚಾಯತಿ ಜಾಗದಲ್ಲಿ ಇವೆ, ಇದರಿಂದ ಇತಿಹಾಸ ಹೊಂದಿರುವ ಗಂಗಾಧರೇಶ್ವರ ಬೆಟ್ಟಕ್ಕೆ ಹೋಗುವ ಭಕ್ತಾದಿಗಳಿಗೆ ಸಾರ್ವಜಕರಿಗೆ ತೋಂದರೆ, ದುರ್ವಾಸನೆ ಇದೆ ಕೂಡಲೆ ಹಂದಿಗೂಡಗಳನ್ನು ತರೆವುಮಾಡಿ ಎಂದರು ಹಾಗೂ ಪಟ್ಟಣದಲ್ಲಿ ಹಲವು ಸೂಕ್ಮ ಸಮಸ್ಯೆಗಳು ಇದ್ದು ಕೂಡಲೇ ಅವುಗಳನ್ನು ಸಹ ಬಗೆಹರಿಸುವಂತೆ ಸೂಚಿಸಿದರು.

ಸದಸ್ಯ ಪುಟ್ಟನರಸಯ್ಯ ಮಾತನಾಡಿ ಕೊರಟಗೆರೆಯಲ್ಲಿ ಹಂದಿ ಅಂಗಡಿಗಳು ಹೆಚ್ಚಾಗಿವೆ ಅವುಗಳನ್ನು ಸ್ಥಳಾಂತರಿಸಿಸುವಂತೆ ಹಾಗೂ ಪಟ್ಟಣದಲ್ಲಿನ ಗುಂಡು ತೋಪು ಪಂಚಾಯತಿ ಜಾಗಗಳನ್ನು ಗುರುತಿಸಿ ಸ್ವಾಧೀನಕ್ಕೆ ಪಡೆಯುವಂತೆ ಅಗ್ರಹಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯಿಂದ ಪೌರಕಾರ್ಮಿಕರಿಗೆ ಮತ್ತು ನೀರು ಸರಬರಾಜುದಾರರಿಗೆ ಜರ್ಕಿನ್ ಗಳನ್ನು ವಿತರಿಸಲಾಯಿತು.


ಸಭೆಯಲ್ಲಿ ಅಧ್ಯಕ್ಷೆ ಅನಿತಾ ಉಪಾದ್ಯಕ್ಷೆ ಹುನ್ನಾಫಾರಿಯಾ, ಸ್ಥಾಯಿಸಮಿತಿ ಅದ್ಯಕ್ಷೆ ಹೇಮಲತ, ಸದಸ್ಯರಾದ ನಾಗರಾಜು, ಕಾವ್ಯ, ಭಾರತಿ, ಮಂಜುಳ ಮುಖ್ಯಾಧಿಕಾರಿ ಉಮೇಶ್, ಅರ್.ಐ.ಶೈಲೇಂದ್ರ, ಹೆಚ್.ಐ..ಹುಸೇನ್. ವೇಣುಗೋಪಾಲ್, ಸಾವಿತ್ರಮ್ಮ, ನಾಗರತ್ನಮ್ಮ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

× How can I help you?