ಮಂಡ್ಯ-ಜಿಲ್ಲೆಯಲ್ಲಿ-ಕೋಳಿ-ಜ್ವರದ-ಬಗ್ಗೆ-ಆತಂಕ-ಬೇಡ-ಡಾ. ಕುಮಾರ


ಮಂಡ್ಯ-
ರಾಜ್ಯದ ಕೆಲವು ಭಾಗಗಳಲ್ಲಿ ಹಕ್ಕಿಜ್ವರ ವರದಿಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ. ಕೋಳಿ ಸಾಕಾಣಿಕೆದಾರರು ಹಕ್ಕಿ ಜ್ವರ ಹರಡದಂತೆ ಪಶುಸಂಗೋಪನಾ ಇಲಾಖೆ ಅವರು ಹೊರಡಿಸಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು.

ಅವರು ಇಂದು (ಮಾ.7) ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೋಳಿ ಜ್ವರ ನಿಯಂತ್ರಣ ಸಂಬಂಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಳಿ ಶೀತ ಜ್ವರ ತಗುಲಿದ ಪಕ್ಷಿಯ ಶ್ವಾಸೇಂದ್ರಿಯ, ಕಣ್ಣಿನ ಕೊಡ್ಪರೆ ಮತ್ತು ಹಿಕ್ಕೆಗಳಿಂದ ವೈರಸ್ ನ್ನು ಹೊರಹಾಕುತ್ತದೆ. ಇದರಿಂದ ಒಂದು ಪಕ್ಷಿಯಿಂದ ಇನ್ನೊಂದು ಪಕ್ಷಿಗೆ ರೋಗ ಹರಡುತ್ತದೆ ಎಂದರು.

 ಮಂಡ್ಯ ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಣೆಯಲ್ಲಿರುವ 420 (ಮಾಂಸದ) ಬ್ರಯ್ಲರ್ ಕೋಳಿ ಫಾರಂಗಳಲ್ಲಿ- 2519050 ಕೋಳಿಗಳು ಹಾಗೂ 23 ಮೊಟ್ಟೆ ಕೋಳಿ ಫಾರಂಗಳಲ್ಲಿ- 526500, ಮನೆಯಲ್ಲಿ ಸಾಕುವ ಕೋಳಿಗಳು-599333 ಕೋಳಿಗಳು ಇರುತ್ತದೆ. ಇವುಗಳ ಬಗ್ಗೆ ಆಯಾ ತಾಲ್ಲೂಕಿನಲ್ಲಿ ನಿಗಾ ವಹಿಸಲು ತಂಡ ರಚಿಸಿ ಎಂದರು.

ಇದಲ್ಲದೇ ಸಾಕಾಣಿಕೆಯ ವಿಭಾಗಕ್ಕೆ ಬಾರದೆ ಇರುವ ಕಾಡು ಪಕ್ಷಿಗಳು, ಕೆರೆ ಕಟ್ಟೆ ಪಕ್ಷಿಧಾಮದ ಬಳಿ ವಾಸಿಸುವ ಪಕ್ಷಿಗಳಲ್ಲಿ ರೋಗದ ಲಕ್ಷಣ ಅಥವಾ ಕೋಳಿ ಜ್ವರ ಕಂಡು ಬಂದಲ್ಲಿ ತಕ್ಷಣ ಕ್ರಮವಹಿಸಲು ತಂಡಗಳನ್ನು ರಚಿಸಿ ಎಂದರು.

ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿ ಕೊಡಬೇಡಿ, ಕೋಳಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬಹುದು ಎಂದು ತಿಳಿಸಿದರು.

ಕೋಳಿ ಫಾರಂ ನಲ್ಲಿ ಕೆಲಸ ನಿರ್ವಹಿಸುವವರು ಕೆಲಸಗಾರರು ಕೋಳಿಗಳ ಜೊತೆ ನಿಕಟ ಸಂಪರ್ಕದಲ್ಲಿರುತ್ತಾರೆ ಅವರಿಗೆ ಕೋಳಿ ಜ್ವರದ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿ ಎಂದರು.

ಜಿಲ್ಲೆಯಲ್ಲಿ ಯಾವುದೇ ಕೋಳಿ ಜ್ವರ ಪ್ರಕರಣಗಳು ದಾಖಲಾದರೆ ಅವುಗಳನ್ನು ವೈಜ್ಞಾನಿಕ ವಿಧಾನದಿಂದ ಮಣ್ಣು ಮಾಡುವುದಕ್ಕೆ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ, ಕೋಳಿಜ್ವರ ಪತ್ತೆಯಾದ ಜಾಗದಿಂದ 1 ಕಿ.ಮೀ ವ್ಯಾಪ್ತಿಯನ್ನು ಇನ್ಫೆಕ್ಟೆಡ್ ಜೋನ್ ಎಂದು ಪರಿಗಣಿಸಲಾಗುವುದು ಎಂದು ಹೇಳಿದರು.

ಇನ್ಫೆಕ್ಟೆಡ್ ಜೋನ್ ನಲ್ಲಿ ಯಾವುದೇ ಪಕ್ಷಿಗಳು ಇರದಂತೆ ಹಾಗೂ ಬಾರದಂತೆ ಕ್ರಮ ವಹಿಸಲಾಗುವುದು, ಜಿಲ್ಲೆಯಲ್ಲಿ ಈಗಾಗಲೇ ವಿಶೇಷ ತಂಡಗಳನ್ನು ರಚಿಸಿ, ಜಿಲ್ಲೆಯ ಎಲ್ಲಾ ಕೋಳಿ ಫಾರಂ ವಿವರಗಳನ್ನು ತೆಗೆದುಕೊಳ್ಳಲಾಗಿದೆ, ಫಾರಂ ಮಾಲೀಕರು ಕೋಳಿಗಳು ಅನುಮಾನಾಸ್ಪದವಾಗಿ ಸತ್ತು ಹೋದರೆ ಕೂಡಲೇ ಅಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಲಾಗಿದೆ ಎಂದರು.

ಸಭೆಯಲ್ಲಿ ಅಪರ ಪೋಲಿಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ಕೆ. ಮೋಹನ್, ಪಶುವೈದ್ಯಾಧಿಕಾರಿ ಡಾ ಸುರೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?