ತುಮಕೂರು: ತಮ್ಮ ಜೀವಿತಾವಧಿಯ ಕೊನೆಯವರೆಗೂ ಸಾಹಿತಿ ಡಾ.ಕವಿತಾಕೃಷ್ಣ ಅವರು ನಿರಂತರ ಸಾಹಿತ್ಯ ಕೃಷಿ ಮಾಡಿ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಕೃತಿಗಳು ಸಾಹಿತ್ಯ ಪ್ರೇಮಿಗಳೊಂದಿಗೆ ಸದಾ ಜೀವಂತವಾಗಿವೆ ಎಂದು ಪಾವಗಡ ರಾಮಕೃಷ್ಣಾಶ್ರಮದ ಡಾ.ಜಪಾನಂದ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕೌತಮಾರನಹಳ್ಳಿಯ ಆಕಾಶ್ ಫಾರಂನಲ್ಲಿ ಡಾ.ಕವಿತಾಕೃಷ್ಣ ಸಾಹಿತ್ಯ ಮಂದಿರ ಹಾಗೂ ಕವಿತಾಕೃಷ್ಣ ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ನುಡಿನಮನ ಹಾಗೂ ಸಾಹಿತ್ಯ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಡಾ.ಕವಿತಾ ಕೃಷ್ಣ ಅವರು ವಿವಿಧ ಸಾಹಿತ್ಯ ಪ್ರಾಕಾರದ ಸುಮಾರು 2೦೦ ಕೃತಿಗಳನ್ನು ರಚಿಸಿದ್ದಾರೆ. ಅಷ್ಟು ಕೃತಿಗಳನ್ನು ರಚಿಸುವುದು ಸುಲಭವಾದ ವಿಚಾರವಲ್ಲ. ಅವರಿಗಿದ್ದ ಸಾಹಿತ್ಯ ಜ್ಞಾನ, ಬರವಣಿಗೆ ಸಾಮರ್ಥ್ಯದಿಂದ ಅದು ಸಾಧ್ಯವಾಗಿದೆ. ಕನ್ನಡ ಸಾಹಿತ್ಯ ವಲಯದಲ್ಲಿ ಅಜರಾಮರಾಗಿದ್ದಾರೆ. ಅವರ ಸಾಹಿತ್ಯ ಸೇವೆಯನ್ನು ಜಿಲ್ಲೆಯ ಜನ ಸದಾ ಸ್ಮರಿಸಬೇಕು ಎಂದು ಹೇಳಿದ ಅವರು, ಕವಿತಾಕೃಷ್ಣ ಸಾಹಿತ್ಯ ಮಂದಿರ ಹಾಗೂ ಅಭಿಮಾನಿಗಳು ಕವಿತಾಕೃಷ್ಣರ ಹೆಸರಿನಲ್ಲಿ ಸಾಹಿತ್ಯ ಕಾರ್ಯಕ್ರಮಗಳನ್ನು ಮುಂದುವರೆಸಿ ಅವರ ಕೊಡುಗೆ ಗೌರವಿಸಿ, ಸಾಹಿತ್ಯ ಸೇವೆ ಮುಂದುವರೆಸಬೇಕು ಎಂದು ಸ್ವಾಮೀಜಿ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಡಾ.ಕವಿತಾಕೃಷ್ಣ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪರಿಷತ್ತಿನೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಅವರ ನಿರಂತರ ಸಾಹಿತ್ಯ ಕೃಷಿ, ಅವರಿಗಿದ್ದ ಸಾಹಿತ್ಯ ಪ್ರೇಮ ಹಲವರು ಸಾಹಿತ್ಯ ಕೃಷಿಯಲ್ಲಿ ತೊಡಗಲು ಕವಿತಾಕೃಷ್ಣ ಪ್ರೇರಣೆಯಾಗಿದ್ದರು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ಧನಿಯಾಕುಮಾರ್ ಹಾಗೂ ಮುಂತಾದವರು ಹಾಜರಿದ್ದರು.