ಚಿಕ್ಕಮಗಳೂರು-ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳು ಸದಾ ಜೀವಂತ ಅವುಗಳನ್ನು ನಮ್ಮ ಜೀನವದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಜೀವನ ನಿರ್ವಹಿಸಲು ಸಾಧ್ಯ ಎಂದು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಆಯೋಜಿಸಿದ್ದ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ದೀಕ್ಷಾ ಭೂಮಿ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಶ್ವ ಕಂಡ ಧೀಮಂತ ವ್ಯಕ್ತಿಗಳಲ್ಲಿ ಅಗ್ರ ಗಣ್ಯರಾಗಿದ್ದಾರೆ. ಇವರ ವಿಚಾರಧಾರೆಗಳಿಗೆ, ಜ್ಞಾನ ಭಂಡಾರಕ್ಕೆ ವಿಶ್ವದಾಂತ್ಯ ತಮ್ಮ ಅನುಯಾಯಿಗಳನ್ನು ಹೊಂದಿದ್ದಾರೆ. ವಿಶ್ವದ ಅನೇಕ ಸಂವಿಧಾನವನ್ನು ಅಧ್ಯಯನ ಮಾಡಿ ಭಾರತಕ್ಕೆ ಸಂವಿಧಾನ ರೂಪಿಸಿ ಕೊಡುವಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರ ಬಹು ಮುಖ್ಯವಾಗಿದೆ ಎಂದರು.
ಸಮಾಜದ ಕಟ್ಟಕಡೆಯ ವ್ಯಕ್ತಿಯ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಬ್ಬರಿಗೂ ಸ್ವತಂತ್ರವಾದ ಜೀವನ ರೂಪಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಬುದ್ಧನ ವಿಚಾರಧಾರೆಗಳಿಂದ ಪ್ರೇರಿತರಾಗಿ ಅವುಗಳನ್ನು ಅನುಸರಿಸುವುದಲ್ಲದೇ 1954ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಬೌದ್ಧ ಧರ್ಮದ ದೀಕ್ಷೆ ಪಡೆಯುವುದರ ಮೂಲಕ ಬೌದ್ಧ ಧರ್ಮಕ್ಕೆ ಮರುಹುಟ್ಟು ನೀಡಿದರು.
ಕರುಣೆ, ಮೈತ್ರಿ, ಪ್ರೀತಿ, ವಾತ್ಸಲ್ಯ ಮತ್ತು ಸಮಾನತೆಯ ಸಂದೇಶವನ್ನು ಸಾರುವ ಬೌದ್ಧ ಧರ್ಮದ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಂಡ ತಮ್ಮ ಅನುಯಾಯಿಗಳಿಗೂ ಬೋಧಿಸಿದರು. ಜಿಲ್ಲೆಯಿಂದ ಸುಮಾರು 150 ಕ್ಕೂ ಹೆಚ್ಚು ಬುದ್ಧ ಹಾಗೂ ಅಂಬೇಡ್ಕರ್ ಅನುಯಾಯಿಗಳು ನಾಗಪುರದ ದೀಕ್ಷಾ ಭೂಮಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಇದರಿಂದ ಬುದ್ಧ ಹಾಗೂ ಅಂಬೇಡ್ಕರ್ ವಿಚಾರಗಳನ್ನು ಇನ್ನಷ್ಟು ಅಧ್ಯಯನ ನಡೆಸಿ ತಮ್ಮ ಅಳವಡಿಸಿಕೊಳ್ಳುವುದರ ಜೊತೆಗೆ ಇತರರಿಗೂ ಬೌದ್ಧ ಧರ್ಮದ ತತ್ವಗಳನ್ನು ಸಾರುವುದರಿಂದ ಸಮಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದ ಅವರು ಸರ್ಕಾರವು ಈ ಯಾತ್ರೆಯನ್ನು ಆಯೋಜಿಸಿರುವುದು ಶ್ಲಾಘನೀಯವಾದದ್ದಾಗಿದೆ ಎಂದರು.
ಜಿಲ್ಲಾ ವಕೀಲ ಸಂಘದ ಕಾರ್ಯದರ್ಶಿ ಅನಿಲ್ ಕುಮಾರ್ ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜದಲ್ಲಿನ ಜಾತಿ ಪದ್ಧತಿ ನಿರ್ಮೂಲನೆ ಮಾಡಿ ಸಮಸಮಾಜ ರೂಪಿಸಲು ಉತ್ತಮ ಮಾರ್ಗಗಳಾಗಿವೆ. ಅಸಮಾನತೆ ಶೋಷಣೆ ವಿರುದ್ಧ ನಿಂತು ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಶ್ರಮಿಸಿದ್ದಾರೆ. ಸಮಾಜದ ಅಸಹಾಯಕರ ಬಾಳಿನ ಧರ್ಮ ಗ್ರಂಥವಾಗಿ ಸಂವಿಧಾನವನ್ನು ರಚಿಸಿ ಸಮಾಜದಲ್ಲಿ ಶಾಂತಿ ನಿರ್ಮಾಣಕ್ಕೆ ಕಾರಣ ಕರ್ತರಾಗಿರುವ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅನುಸರಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್ ಹಾಗೂ ಸಿಬ್ಬಂದಿಗಳು, ದಲಿತ ಮುಖಂಡರುಗಳಾದ ಭೀಮ ಆರ್ಮಿ ಹೊನ್ನೇಶ್, ಧರ್ಮೇಶ್, ಹರೀಶ್, ಹುಣಸೆಮಕ್ಕಿ ಲಕ್ಷ್ಮಣ್, ಹಲವು ಸಂಘಟನೆಗಳ ಪದಾಧಿಕಾರಿಗಳು ಮತ್ತು ಯಾತ್ರಿಗಳು ಉಪಸ್ಥಿತರಿದ್ದರು.