ಎಚ್.ಡಿ.ಕೋಟೆ-ವಾರ್ಷಿಕ ಪರೀಕ್ಷೆಯಲ್ಲಿ-ಹೆಚ್ಚಿನ ಅಂಕಗಳನ್ನು ಪಡೆಯಿರಿ-ಏಕಲವ್ಯ-ವಸತಿ ಶಾಲೆ- ವಿದ್ಯಾರ್ಥಿಗಳಿಗೆ-ಪ್ರಾಂಶುಪಾಲರ-ರಾಕೇಶ್ ಚಂದ್ರವರ್ಮ-ಶುಭ ಹಾರೈಕೆ

ಎಚ್.ಡಿ.ಕೋಟೆ: ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಇಂದು ಸರ್ಕಾರಿ ಶಾಲೆಗಳು ಬೆಳೆಯುತ್ತಿವೆ. ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ‌ ಸಾಧನೆ ಮಾಡಬೇಕು ಎಂದು ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲ ರಾಕೇಶ್ ಚಂದ್ರವರ್ಮ ತಿಳಿಸಿದರು.

ತಾಲೂಕಿನ ಸೊಳ್ಳೇಪುರ ಹಾಡಿಯ ಏಕಲವ್ಯ ವಸತಿ ಶಾಲೆಯಲ್ಲಿ ನಡೆದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಶುಭ ಹಾರೈಕೆ ಕೋರುವ ಸಮಾರಂಭದಲ್ಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಿರಿ ಜನರಿಗೆ ನೀಡುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ಶಾಲೆಗಳನ್ನು ನಿರ್ಮಿಸಿ, ವಿದ್ಯಾರ್ಥಿಗಳಿಗೆ ಪೂರಕ ವಾತಾವರಣವನ್ನು ನಿರ್ಮಿಸಿದೆ ಎಂದು ತಿಳಿಸಿದರು.

ಶಾಲೆಯ ವಿದ್ಯಾರ್ಥಿಗಳಿಗೆ ಬೇಕಾದ ಪರಿಕರಗಳನ್ನು ನೀಡುವುದರ ಜೊತೆಗೆ, ಆರೋಗ್ಯದ ಕಾಳಜಿಯನ್ನೂ ಸಹ ನೀಡಲಾಗಿದೆ. ಗಿರಿಜನರು ಇಂದು ಮುಖ್ಯವಾಹಿನಿಗೆ ಬರಬೇಕು. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಸಾಧನೆ ಮಾಡಬೇಕು ಎಂದು ತಿಳಿಸಿದರು.

ತಾಲೂಕಿನಲ್ಲಿ ಬಹುತೇಕ ಬಡ ಕೂಲಿ ಕಾರ್ಮಿಕರ ಜನರೇ ವಾಸಿಸುತ್ತಿರುವುದರಿಂದ ಪೋಷಕರ ಕಷ್ಟಗಳನ್ನು ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಬಹಳ ಹತ್ತಿರದಿಂದ ನೋಡಿದ್ದಾರೆ.ನಾವು ಪೋಷಕರಂತೆ ಕಷ್ಟ ಪಡಬಾರದೆಂದು ತಿಳಿದು ಸಮಯ ವ್ಯರ್ಥ ಮಾಡದೇ ಚೆನ್ನಾಗಿ ಓದಬೇಕು. ಮಾರ್ಚ್ ತಿಂಗಳಲ್ಲಿ‌ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕಗಳಿಸುವ ಮೂಲಕ ಶಾಲೆ, ಕಾಲೇಜಿಗೆ ಪೋಷಕರಿಗೆ ಕೀರ್ತಿ ತರಬೇಕೆಂದು ಕಿವಿ ಮಾತು ಹೇಳಿದರು.

ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ‌ ನಡೆಸಿಕೊಡಲಾಯಿತು.ವೇದಿಕೆಯಲ್ಲಿ ಬುಡಕಟ್ಟು ಜನಾಂಗದ ಮುಖಂಡರು, ಪೋಷಕ ಸಮಿತಿಯ ಅಧ್ಯಕ್ಷ, ಸದಸ್ಯರು, ಚಕ್ಕೋಡನಹಳ್ಳಿ ಗ್ರಾ.ಪಂ ಉಪಾಧ್ಯಕ್ಷ ರಾಜು, ಸ್ಥಳೀಯರಾದ ಜಿ.ಸ್ವಾಮಿ, ಜಯಮ್ಮ, ಉಮೇಶ್, ಸ್ವಾಮಿ, ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಫೀ, ಬೋಧಕ, ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಅಕ್ಕ-ಪಕ್ಕದ ಗ್ರಾಮಸ್ಥರು ಭಾಗವಹಿಸಿದ್ದರು.

  • ಶಿವು ಕೋಟೆ, ಎಚ್.ಡಿ.ಕೋಟೆ

Leave a Reply

Your email address will not be published. Required fields are marked *

× How can I help you?