ಕೆ ಆರ್ ಪೇಟೆ-ಚಿಕ್ಕಳಲೆ–ಕೃಷ್ಣಾಪುರದಲ್ಲಿ ಕುಟುಂಬ ಭಿನ್ನತೆ: 25 ವರ್ಷಗಳಿಂದ ಜಮೀನು ವಿವಾದ, ಸರ್ಕಾರದ ಮಧ್ಯಸ್ಥಿಕೆ ಮನವಿ


ಕೆಆರ್ ಪೇಟೆ – ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚಿಕ್ಕಳಲೆ ಮತ್ತು ಕೃಷ್ಣಾಪುರ ಗ್ರಾಮಗಳಲ್ಲಿ, ಸರ್ಕಾರದಿಂದ ಮಂಜೂರಾದ ಜಮೀನಿನ ಹಂಚಿಕೆ ವಿಚಾರದಲ್ಲಿ ಮುಳ್ಳುಗಟ್ಟಿದ ಕುಟುಂಬ ಕಲಹ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಲೇಟ್ ದಾಸಚಾರಿ ಮತ್ತು ಲೇಟ್ ಅಮ್ಮಣಮ್ಮ ದಂಪತಿಯ ಮೂರು ಪುತ್ರರಾದ ಸೋಮಚಾರಿ, ಜಯರಾಮಚಾರಿ ಮತ್ತು ಕೃಷ್ಣಚಾರಿ ನಡುವೆ ಜಮೀನಿನ ಹಕ್ಕು ಹಂಚಿಕೆ ಕುರಿತು 25 ವರ್ಷಗಳಿಂದ ಹೋರಾಟ ನಡೆಯುತ್ತಿದೆ.

ತಂದೆ-ತಾಯಂದಿರ ಮರಣಾನಂತರದಲ್ಲಿ, ಅವರ ಒಟ್ಟು ಜಮೀನಿನಲ್ಲಿ ಕಿರಿಯ ಪುತ್ರ ಕೃಷ್ಣಚಾರಿಗೆ ಒಂದು ಗುಂಟೆ ಜಮೀನನ್ನು ನೀಡಬೇಕಿತ್ತು. ಆದರೆ, ಹಿರಿಯ ಸಹೋದರರಾದ ಸೋಮಚಾರಿ ಮತ್ತು ಜಯರಾಮಚಾರಿ ಜಮೀನನ್ನು ತಮ್ಮ ಮಧ್ಯೆ ಹಂಚಿಕೊಂಡು, ಕೃಷ್ಣಚಾರಿಯ ಹಕ್ಕನ್ನು ನಿರ್ಲಕ್ಷಿಸಿದ್ದಾರೆ. ಹೀಗಾಗಿ ಕೃಷ್ಣಚಾರಿಯ ಕುಟುಂಬ 20 ವರ್ಷಗಳಿನಿಂದ ಹಕ್ಕುಮರೆಚಾಟ ಹಾಗೂ ಮೋಸದ ಬಲಿಯಾದಂತಾಗಿದೆ.

ಜಮೀನಿನ ಸಮಪಾಲು ಹಂಚಿಕೆ ಆಗದೇ ಇರುವ ಕಾರಣದಿಂದ, ಈ ಕುಟುಂಬದ ಸದಸ್ಯರ ನಡುವೆ ನಿರಂತರ ಜಗಳ, ಹೊಡೆದಾಟ, ಪೊಲೀಸರಿಗೆ ದೂರುಗಳು ದಾಖಲಾಗುತ್ತಿರುವುದು, ನ್ಯಾಯಾಲಯಗಳಲ್ಲಿ ಹತ್ತುಕ್ಕೂ ಹೆಚ್ಚು ಪ್ರಕರಣಗಳು ಸಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದ್ದು, ಕುಟುಂಬಗಳ ನೆಮ್ಮದಿ ಸಂಪೂರ್ಣವಾಗಿ ಹಾಳಾಗಿದೆ.‌

ಕೃಷ್ಣಚಾರಿ ಪ್ರತ್ಯೇಕವಾಗಿ ಒಂದು ಎಕರೆ ಖಾಲಿ ಜಮೀನನ್ನು ಉಳುಮೆ ಮಾಡುತ್ತಿದ್ದಾರೆ. ಈ ಸಂಬಂಧ ಕೋರ್ಟ್ ಗೆ ಮನವಿ ಸಲ್ಲಿಸಿ, ತಾಲ್ಲೂಕು ಕಚೇರಿಯಿಂದ ಮಂಜೂರಾತಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಅವರ ಹಕ್ಕನ್ನು ಅಡ್ಡಗಟ್ಟುವ ನಿಟ್ಟಿನಲ್ಲಿ ಸೋಮಚಾರಿ ಮತ್ತು ಜಯರಾಮಚಾರಿ ಸೇರಿ ಪಕ್ಕದ ಜಮೀನುದಾರರು ದಾರಿ ತಡೆದು, ಹಲ್ಲೆ ಮಾಡಲು ಯತ್ನಿಸಿದ ಆರೋಪ ಕೇಳಿಬಂದಿದೆ.

ಇತ್ತೀಚೆಗೆ, ಲಿಂಗಾಪುರ ಗ್ರಾಮದ ಬಸವಯ್ಯ ಬಿನ್ ಹೋನ್ನಯ್ಯ ಮೇಲೆ ಹಲ್ಲೆ ಯತ್ನ ನಡೆದಿದ್ದು, ಈ ಸಂಬಂಧ 18 ಏಪ್ರಿಲ್ 2025ರಂದು ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಈ ತನಕ ಪೊಲೀಸರು ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಕೃಷ್ಣಚಾರಿಯ ಕುಟುಂಬದ ಆಕ್ಷೇಪ.

ಸ್ಥಳೀಯ ಮುಖಂಡರಾದ ಚಿಕ್ಕೇಗೌಡ, ಮಹೇಶ್, ರುದ್ರೇಶ ಸಿ.ಎಸ್., ಗಿರೀಶ್ ಕೆ.ಎನ್., ಚಂದ್ರಶೇಖರ ಕೆ.ಎನ್., ಬಸವರಾಜ, ಸ್ವಾಮಿರವರು, ಶಂಕರ್, ಮಂಜೇಗೌಡ, ಪುಟ್ಟೇಗೌಡ, ಮಂಜುನಾಥ, ದೇವರಾಜು ಮತ್ತು ಇತರರು ಸೇರಿ, ಕೆಆರ್ ಪೇಟೆ ಶಾಸಕ ಹೆಚ್.ಟಿ. ಮಂಜು, ತಹಶೀಲ್ದಾರರು ಹಾಗೂ ಉಪ ವಿಭಾಗಾಧಿಕಾರಿಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

“ಸರ್ಕಾರದ ಮಂಜೂರಾದ ಜಮೀನನ್ನು ನ್ಯಾಯಸಮ್ಮತವಾಗಿ ಹಂಚಿಕೆ ಮಾಡಿ, ಕುಟುಂಬಗಳಿಗೆ ಶಾಂತಿ, ನೆಮ್ಮದಿ ಒದಗಿಸುವಂತೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಕುಟುಂಬಗಳ ಸಂಪೂರ್ಣ ಅವನತಿ ಅನಿವಾರ್ಯವಾಗುತ್ತದೆ,” ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *

× How can I help you?