ಕೊರಟಗೆರೆ-ಕಲ್ಲುಗಣಿಗಾರಿಕೆ-ಮತ್ತು-ಜಲ್ಲಿ-ಕ್ರಷರ್-ಘಟಕ-ಸ್ಥಾಪನೆ- ವಿರುದ್ಧ-ರೈತರ-ಪ್ರತಿಭಟನೆ

ಕೊರಟಗೆರೆ :- ಚೀಲಗಾನಹಳ್ಳಿ ಸಮೀಪ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ 15 ವರ್ಷಗಳಿಂದ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಕೊರಟಗೆರೆ ಆಡಳಿತ ಮತ್ತು ಗಣಿ ಇಲಾಖೆ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಕೊರಟಗೆರೆ ಪಟ್ಟಣದ ಮಿನಿ ವಿಧಾನಸೌದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಚೀಲಗಾನಹಳ್ಳಿ ರೈತರು ಟ್ರ್ಯಾಕ್ಟರ್ ಸಮೇತ ಮುತ್ತಿಗೆಹಾಕಿ ಕಲ್ಲುಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಘಟಕ ನಿರ್ಮಾಣಕ್ಕೆ ಸರಕಾರಿ ಅಧಿಕಾರಿಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜುರಾಧ್ಯ ಮಾತನಾಡಿ, ತುಮಕೂರು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಗಣಿಗಾರಿಕೆಯಿಂದ ಪರಿಸರ ಹಾಳಾಗಿದೆ, ಈಗ ಮತ್ತೆ ಕೊರಟಗೆರೆಯಲ್ಲಿ ಗಣಿಗಾರಿಕೆ ಪ್ರಾರಂಭಕ್ಕೆ ಅಧಿಕಾರಿಗಳೇ ಪರೋಕ್ಷವಾಗಿ ಬೆಂಬಲ ನೀಡುತ್ತಿರೋದು ನಮ್ಮ ದುರ್ದೈವ ಎಂದು ಕಿಡಿಕಾರಿದರು.

ಕೊರಟಗೆರೆ ರೈತ ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಕೊರಟಗೆರೆ ಕ್ಷೇತ್ರವು ಮಿನಿಬಳ್ಳಾರಿ ಆಗುವತ್ತ ಹೆಜ್ಜೆಇಟ್ಟಿದೆ. ನಮ್ಮ ಕ್ಷೇತ್ರದ ಬೆಟ್ಟಗುಡ್ಡಗಳನ್ನು ಅಧಿಕಾರಿವರ್ಗ ಮಾರಾಟಕ್ಕೆ ಇಟ್ಟಿದ್ದಾರೆ, ನಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಕ್ಷಣವೇ ಗಣಿಗಾರಿಕೆ ನಡೆಸದಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕಿದೆ ಎಂದರು.

ಪ್ರತಿಭಟನೆ ನಿರತ ನೂರಾರು ಮಂದಿ ರೈತರಿಗೆ ಊಟದ ವ್ಯವಸ್ಥೆಯನ್ನ ಮಿನಿವಿಧಾಸೌಧ ಕಚೇರಿ ಮುಂಭಾಗ ಆಯೋಜಿಸಲಾಯಿತು, ಆವರಣದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ರೈತರು ಊಟ-ತಿಂಡಿ ನಂತರ ಅಲ್ಲೇ ಇಡೀ ರಾತ್ರಿ ವಾಸ್ತವ್ಯ ಹೂಡಲು ವ್ಯವಸ್ಥೆ ನೆಡೆಯಿತು, ನಂತರ ತಹಶೀಲ್ದಾರ್ ಮಂಜುನಾಥ್ ಕೆ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರೈತರ ಓಲೈಕೆಗೆ ಅರಸಹಾಸ ಪಟ್ಟರು.

ಪ್ರತಿಭಟನೆಯಲ್ಲಿ ಚೀಲಗಾನಹಳ್ಳಿ ಆಸು ಪಾಸು ರೈತರು, ತಂಗನಹಳ್ಳಿ, ಮಣ್ಣೂರುತಿಮ್ಮನಹಳ್ಳಿ ರೈತರು ಪಾಲ್ಗೊಂಡಿದ್ದರು, ಇದೇ ಸಂದರ್ಭದಲ್ಲಿ ರೈತ ಸಂಘದ ಲೊಕೇಶ್, ಪ್ರಸನ್ನ ರಾಮಚಂದ್ರಪ್ಪ ಕೆಂಪರಾಜು, ರಾಜಣ್ಣ ವೀರ ಕ್ಯಾತ ರಾಯ, ಶ್ರೀರಂಗಯ್ಯ, ಹನುಮಂತ ರಾಯಪ್ಪ ಜುಂಜಣ್ಣ ದಯಾನಂದ್, ಕಾಂತಮ್ಮ ಸೇರಿದಂತೆ ಇತರರು ಹಾಜರಿದ್ದರು.

ಡಿಸಿ ಭರವಸೆ ಹಿನ್ನೆಲೆ ಅಹೋರಾತ್ರಿ ಧರಣಿ ವಾಪಸ್‌

ಕೊರಟಗೆರೆ ಕ್ಷೇತ್ರದ ಹಲವು ಕಡೆ ಕಲ್ಲುಗಣಿಗಾರಿಕೆ ಪ್ರಾರಂಭಕ್ಕೆ ವಿರೋಧ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ಈಗಾಗಲೇ ಎರಡು ಸಭೆ ಮಾಡಿ ಚರ್ಚಿಸಲಾಗಿದೆ. ಮುಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ರೈತರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಡಿಸಿ ಶುಭಾ ಕಲ್ಯಾಣ್ ಭರವಸೆ ನೀಡಿದ ಹಿನ್ನೆಲೆ ರೈತರು ಅಹೋರಾತ್ರಿ ಧರಣಿ ವಾಪಸ್ ಪಡೆಯಲು ನಿರ್ಧರಿಸಿದರು.

-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?