ಮಂಡ್ಯ- ಜಾನಪದ ಕಲೆ ನಶಿಸಿ ಹೋಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಜಾನಪದ ಜಾತ್ರೆಯನ್ನು ಅದ್ದೂರಿಯಾಗಿ ಆಚರಿಸಬೇಕು ಎಂದು ಮಂಡ್ಯ ಶಾಸಕ ಪಿ. ರವಿಕುಮಾರ್ ಅವರು ಹೇಳಿದರು.
ಇಂದು (ಎ.3) ರಂದು ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ) ಹಮ್ಮಿಕೊಳ್ಳಲಾಗಿದ್ದ ಜಾನಪದ ಜಾತ್ರೆ – 2025 ಕಾರ್ಯಕ್ರಮವನ್ನು ದೀಪಾ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಪ್ರಭಾವಕ್ಕೊಳಗಾಗಿ ಅನೇಕ ಜಾನಪದ ಆಟ, ಸಂಸ್ಕೃತಿ, ಕಲೆಗಳು ಅವನತಿ ಅಂಚಿನಲ್ಲಿ ನಿಂತಿರುವುದು ದುಃಖಕರ ವಿಷಯ ಎಂದು ವಿಷಾದ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ವಿಶೇಷ ಮುತುವರ್ಜಿ ವಹಿಸಿ ಜಾನಪದ ಸಂಸ್ಕೃತಿ ಕಲೆಯನ್ನು ಉಳಿಸುವ ಸಲುವಾಗಿ ಸದರಿ ವರ್ಷದಿಂದ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಜಾನಪದ ಜಾತ್ರೆ ಆಚರಿಸುವಂತೆ ಸೂಚನೆ ನೀಡಿದ್ದಾರೆ, ಆದರಲ್ಲೂ ನಮ್ಮ ಜಿಲ್ಲೆಯ ಮಹಿಳಾ ಕಾಲೇಜಿನಲ್ಲಿ ದಶಕಗಳ ಹಿಂದಿನಿಂದಲೂ ಜಾನಪದ ಜಾತ್ರೆ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

ಮಂಡ್ಯ ವಿಶ್ವವಿದ್ಯಾನಿಲಯವನ್ನು ಉಳಿಸಲು ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡAತೆ ಸಾಂಸ್ಕೃತಿಕ ಜಾತ್ರೆ ಆಯೋಜಿಸಿ ಸರ್ಕಾರ ಗಮನ ಸೆಳೆಯೋಣ, ಎಲ್ಲಾ ವಿದ್ಯಾರ್ಥಿಗಳ ಅದರಲ್ಲಿ ಭಾಗವಹಿಸಿ, ಮಂಡ್ಯ ವಿಶ್ವವಿದ್ಯಾನಿಲಯವನ್ನು ಉಳಿಸಿ ಅದಕ್ಕೆ ಮೆರುಗು ನೀಡಬೇಕೆಂದು ಕರೆ ನೀಡಿದರು.
ರಂಗಕರ್ಮಿಗಳು, ಜನಪದ ಗಾಯಕರು ಹಾಗೂ ರಂಗಾಯಣದ ಮಾಜಿ ನಿರ್ದೇಶಕರಾದ ಜನಾರ್ಧನ್ ಹೆಚ್ ಅವರು ಮಾತನಾಡಿ ಮಂಡ್ಯ ಜಿಲ್ಲೆ ಜಾನಪದದ ತವರೂರು, ಕಲಾವಿದರು ಒಂದಾಗಿ ಉತ್ಸವ, ಜಾತ್ರೆಗಳಲ್ಲಿ ಸಂಸ್ಕೃತಿಕವಾಗಿ ಸಮನ್ವಯ ಸಾಧಿಸಲು ಜಾನಪದ ಜಾತ್ರೆ ಸಹಾಯ ಮಾಡುತ್ತದೆ ಎಂದರು.

ತಾಯ್ತನದ ತತ್ವವನ್ನು ಎಲ್ಲರಲ್ಲೂ ಬಿತ್ತುವ ಕೆಲಸ ಜಾನಪದ ಮಾಡುತ್ತಿದೆ, ನಮ್ಮ ಗೂಡು ಬಿಟ್ಟು ಹೊರಗಿನ ಪ್ರಪಂಚದೊAದಿಗೆ ಸಂಪರ್ಕ ಬೆಳೆಸಿಕೊಳ್ಳಿ ಆಗ ಜಾನ್ಞ, ಬುದ್ಧಿಶಕ್ತಿ, ಆತ್ಮಬಲ ಹೆಚ್ಚಾಗುವುದು ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಗುದ್ದಲಿ, ಪಿಕಾಸಿ, ಎತ್ತಿನ ಗಾಡಿಯನ್ನು ಹಳ್ಳಿಯಲ್ಲೇ ಹುಡುಕುವುದು ಕಷ್ಟವಾಗುವಂತಹ ಸಂದರ್ಭದಲ್ಲಿ ನಾವಿರುವುದು ವಿಪರ್ಯಾಸ ಎಂದು ಹೇಳಿದರು.
ಜಾನಪದ ಸಂಸ್ಕೃತಿ ಭಾರತೀಯರಿಗೆ ಪರಂಪರೆಯಿAದಲ್ಲೇ ಬಂದಿದೆ, ಇಂದಿನ ದಿನಗಳಲ್ಲಿ ಜಾನಪದ ಸಂಸ್ಕೃತಿ ಬೆಳೆಸುವುದರ ಜೊತೆಗೆ ಸಂರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ, ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಹೆಮ್ಮೆಯ ಜಾನಪದ ಸಂಸ್ಕೃತಿಯನ್ನು ಬಳುವಳಿಯಾಗಿ ನೀಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮೂಡ ಅಧ್ಯಕ್ಷ ನಹೀಮ್, ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು.ಕೆ. ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ನಿಂಗರಾಜು ಹೆಚ್.ಎಸ್, ಸಾಂಸ್ಕೃತಿಕ ವೇದಿಕೆಯ ಖಜಾಂಚಿ ಡಾ. ಮಂಗಳಮ್ಮ ಕೆ.ಎಂ. ಮಹಿಳಾ ಸರ್ಕಾರಿ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕರಾದ ರವಿಕಿರಣ್ ಕೆ.ಪಿ ಮತ್ತು ಹೇಮಲತ ಎಸ್.ಪಿ, ಹಾಗೂ ಕೆ. ಎಸ್ ಆನಂದ್, ಎಂ.ಬಿ. ಪ್ರತಾಪ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಜಾನಪದ ಜಾತ್ರೆ – 2025 ರ ಮೆರವಣಿಗೆ
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ (ಸ್ವಾಯತ್ತ) ಆಯೋಜಿಸಲಾಗಿದ್ದ ಜಾನಪದ ಜಾತ್ರೆ – 2025 ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಜಾನಪದ ಕಲಾ ಪ್ರಕಾರಗಳನ್ನು ಕಾಲೇಜಿನ ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪ್ರದರ್ಶಿಸಿದರು, ಮಂಡ್ಯ ವಿಧಾನಸಭಾ ಶಾಸಕ ಪಿ. ರವಿಕುಮಾರ್ ಅವರು ಡೊಳ್ಳು ಭಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮಹಿಳಾ ಕಾಲೇಜಿನ ಆವರಣದಿಂದ ವನರಂಗದವರೆಗೆ ಎತ್ತಿನಗಾಡಿ ಮೇಲೆ ಶಾಸಕ ಪಿ. ರವಿಕುಮಾರ್ ಅವರು ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆಯಲ್ಲಿ ಪೂರ್ಣ ಕುಂಭ ಹೊತ್ತು ವಿದ್ಯಾರ್ಥಿನಿಯರು, ಡೊಳ್ಳು ಕುಣಿತ, ಕಂಸಾಳೆ, ಪಟ್ಟ ಕುಣಿತ, ವೀರಗಾಸೆ, ಪೂಜಾ ಕುಣಿತ, ಯಕ್ಷಗಾನ, ರಂಗ ಕುಣಿತ, ಬೊಂಬೆ ಕುಣಿತ ಸೇರಿದಂತೆ ವಿವಿಧ ತಂಡಗಳು ಸಮೂಹ ಮೆರವಣಿಗೆಯಲ್ಲಿ ಸಾಗಿತು.
