ಮೂಡಿಗೆರೆ-ಬಲ್ಲಾಳರಾಯನ-ದುರ್ಗದಲ್ಲಿ-ಕಾಡ್ಗಿಚ್ಚು-ಅಪಾರ-ಸಸ್ಯ- ಸಂಪತ್ತಿಗೆ-ಹಾನಿ

ಕೊಟ್ಟಿಗೆಹಾರ (ಮೂಡಿಗೆರೆ): ಬಲ್ಲಾಳರಾಯನ ದುರ್ಗ ಮೀಸಲು ಅರಣ್ಯದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಾಳೂರು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಬೆಟ್ಟಗಳಲ್ಲಿ ಈ ದುರಂತ ಸಂಭವಿಸಿದೆ.

ಬಲ್ಲಾಳರಾಯನ ದುರ್ಗ ಅತ್ಯಂತ ದುರ್ಗಮ ಪ್ರದೇಶವಾಗಿದ್ದು, ಇಲ್ಲಿ ಕಡಿದಾದ ಕಲ್ಲುಗಳು ಹಾಗೂ ಇಳಿಜಾರು ಪ್ರದೇಶಗಳಿವೆ. ಇದರಿಂದಾಗಿ ಬೆಂಕಿ ನಂದಿಸುವ ಕಾರ್ಯ ತುಂಬಾ ಸವಾಲಿನದ್ದಾಗಿದೆ. ಈ ಪ್ರದೇಶಕ್ಕೆ ಮನುಷ್ಯರು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗದೆ, ಬೆಂಕಿ ತೀವ್ರವಾಗಿ ಹಬ್ಬಿದೆ.

ಕಲ್ಲಿನ ಗೋಡೆಗಳಲ್ಲಿರುವ ಒಣ ಹುಲ್ಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ದುರ್ಗಮ ಅರಣ್ಯ ಪ್ರದೇಶದ ಅಪಾರಮೂಲ್ಯ ವನ್ಯ ಸಂಪತ್ತು ನಾಶವಾಗಿದೆ. ಆದರೆ, ಅರಣ್ಯ ಅಧಿಕಾರಿಗಳು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳದೆ ಇರುವುದರಿಂದ ಪರಿಸರ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶವು ಬಹುಮುಖ್ಯ ಪರಿಸರ ಭಾಗವಾಗಿದ್ದು, ತಕ್ಷಣವೇ ಅಗ್ನಿ ಶಮನ ಹಾಗೂ ಅರಣ್ಯ ಸಂರಕ್ಷಣೆ ಸಂಬಂಧಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?