ಕೊಟ್ಟಿಗೆಹಾರ – ತರುವೆ ಗ್ರಾಮದ ಕುಂಟುಗುಡು ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಕಾಡ್ಗಿಚ್ಚಿಯಿಂದ ಅಪಾರ ಪ್ರಮಾಣದ ಹುಲ್ಲುಗಾವಲು ಹಾಗೂ ಕುರುಚಲು ಕಾಡು ಭಸ್ಮವಾಗಿರುವ ಘಟನೆ ನಡೆದಿದೆ.
ಸ್ಥಳೀಯ ಮಾಹಿತಿ ಪ್ರಕಾರ, ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದ ಈ ದುರಂತ ಸಂಭವಿಸಿದೆ. ಇದರಿಂದ ಸತ್ಯ ಸಂಕುಲ (ಪ್ಲೋರಾ) ಹಾಗೂ ಸೂಕ್ಷ್ಮ ಜೀವಿಗಳು (ಫೌನಾ) ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಮಲೆನಾಡಿನ ಈ ಪ್ರದೇಶದಲ್ಲಿ ಇತ್ತೀಚೆಗೆ ತೀವ್ರ ತಾಪಮಾನ ಮತ್ತು ಬಿಸಿಗಾಳಿಯಿದ್ದರಿಂದ ಬೆಂಕಿ ತೀವ್ರವಾಗಿ ಹಬ್ಬಿ, ನಿಯಂತ್ರಣಕ್ಕೆ ತರಲು ಗ್ರಾಮಸ್ಥರು ಹರಸಾಹಸಪಟ್ಟರು.

ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಬೆಂಕಿ ನಂದಿಸಲು ಶ್ರಮಪಟ್ಟರೂ, ಹೆಚ್ಚಿನ ಪ್ರದೇಶ ಸುಟ್ಟುಹೋಗಿದ್ದು, ಪರಿಸರಕ್ಕೆ ಅಪಾರ ಹಾನಿಯಾಗಿದೆ. ಈ ಘಟನೆ ಬಗ್ಗೆ ಸಂಬಂಧಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.