ಕೆ.ಆರ್.ಪೇಟೆ – ತಾಲೂಕಿನ ಕೈಗೋನಹಳ್ಳಿ ಗ್ರಾಮದಲ್ಲಿ ಗ್ರಾಮ ರಕ್ಷಕನಾದ ಶ್ರೀವೀರಭದ್ರೇಶ್ವರ ಸ್ವಾಮಿಯವರ ರಂಗದ ಹಬ್ಬದ ಅಂಗವಾಗಿ ದೇವರ ಅಡ್ಡ ಪಲ್ಲಕಿ ಉತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ರಂಗದ ಹಬ್ಬದ ಅಂಗವಾಗಿ ನಡೆದ ರಂಗ ಕುಣಿತದಲ್ಲಿ ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ಕುಣಿತ ಪ್ರದರ್ಶನ ಮಾಡಿದ ಗ್ರಾಮದ ಸುಪುತ್ರ ರಾಜ್ಯದ ಮಾಜಿಸಚಿವ ಡಾ.ನಾರಾಯಣ ಗೌಡ ಲೋಕದ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ವೀರಭದ್ರೇಶ್ವರ ಸ್ವಾಮಿಯವರ ಅಡ್ಡ ಪಲ್ಲಕಿಯನ್ನು ಹೆಗಲ ಮೇಲೆ ಹೊತ್ತು ಗ್ರಾಮದ ರಸ್ತೆಯಲ್ಲಿ ಸಂಚರಿಸಿ ಭಕ್ತಿ ಭಾವ ಪ್ರದರ್ಶನ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಹಬ್ಬ ಹರಿದಿನಗಳು, ಜಾತ್ರೆ ಉತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಜಾತಿ ಮತ ಪಂಥಗಳಿಂದ ಹೊರಬಂದು ಒಂದಾಗಿ ಸ್ನೇಹ ಸಹಬಾಳ್ವೆಯಿಂದ ಹಬ್ಬವನ್ನು ಆಚರಿಸಿದಾಗ ದೊರೆಯುವ ಸಂತೋಷ, ಸಡಗರಕ್ಕೆ ಯಾವುದೇ ಬೆಲೆಕಟ್ಟಲು ಸಾಧ್ಯವಾಗುವುದಿಲ್ಲ. ಸಾಧ್ಯವಾದರೆ ಸಂಕಷ್ಟದಲ್ಲಿರುವ ಒಬ್ಬ ನೊಂದ ವ್ಯಕ್ತಿಗೆ ಒಳ್ಳೆಯದು ಮಾಡೋಣ. ನಾವು ಬದುಕಿ ತಮ್ಮ ಶ್ರಮದ ದುಡಿಮೆಯ ಮೂಲಕ ಬೇರೆಯವರ ತೊಂದರೆಗಳು ಹಾಗೂ ಕಷ್ಟಗಳಿಗೆ ಕೈಲಾದ ಸಹಾಯ ಮಾಡಿ ನೊಂದವರ ಸಂತೋಷದಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಮಾಡೋಣ ಎಂದು ಮನವಿ ಮಾಡಿದರು.

ಗ್ರಾಮದ ಸುಪುತ್ರ ಇಂಜಿನಿಯರ್ ಮಂಜಣ್ಣ, ಮನ್ ಮುಲ್ ನಿರ್ದೇಶಕ ಡಾಲು ರವಿ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಅರೆಬೊಪ್ಪನಹಳ್ಳಿ ಸುನಿಲ್, ಮಾಜಿ ನಿರ್ದೇಶಕ ಕೈಗೋನಹಳ್ಳಿ ಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸುನಿಲ್, ನಾರಾಯಣಗೌಡರ ಧರ್ಮಪತ್ನಿ ದೇವಕಿ, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ಮಂಜೇಗೌಡ, ಮುಖಂಡರಾದ ದಯಾನಂದ, ಜಯರಾಮು, ಪಟೇಲ್ ನಂಜಪ್ಪ, ಮುದ್ದೇಗೌಡ, ಹರೀಶ್, ನಂದಕುಮಾರ್, ಈರಪ್ಪಣ್ಣ, ಬೋರೇಗೌಡ ಸೇರಿದಂತೆ ಸಾವಿರಾರು ಭಕ್ತರು ರಂಗದ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.