ಎಚ್.ಡಿ.ಕೋಟೆ: ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಾಧರ್ ಉಡಾಫೆಯಿಂದ ನಡೆದುಕೊಳ್ಳುತ್ತಾರೆ ಎಂದು ಆರೋಪಿಸಿ ಮಾಜಿ ಶಾಸಕ ಬೀಚನಹಳ್ಳಿ ಚಿಕ್ಕಣ್ಣ ನೇತೃತ್ವದಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಮುಖಂಡರು ಬುಧವಾರ ಪಟ್ಟಣದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
3 ದಿನಗಳ ಹಿಂದೆ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜೇಂದ್ರ, ಮಾಜಿ ಅಧ್ಯಕ್ಷ ನರಸಿಂಹೇಗೌಡ, ಪ್ರಕಾಶ್ ಮತ್ತಿತರರು ತಾಲೂಕಿನ ಜಿ.ಬಿ.ಸರಗೂರಿನ ಜಮೀನಿನ ವಿಚಾರವಾಗಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಇನ್ಸ್ಪೆಕ್ಟರ್ ಗಂಗಾಧರ್ ಅಗೌರವದಿಂದ ನಡೆದುಕೊಂಡು ಉಡಾಫೆಯಿಂದ ಮಾತನಾಡಿ ಠಾಣೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ಸ್‌ಪೆಕ್ಟರ್ ನಡೆ ಖಂಡಿಸಿ ಬಿಜೆಪಿ, ಜೆಡಿಎಸ್ ಮುಖಂಡರು ಠಾಣೆಗೆ ಮುತ್ತಿಗೆ ಹಾಕಿ ಇನ್ಸ್‌ಪೆಕ್ಟರ್ ಅವರನ್ನು ತೀವ್ರ ತರಾಟೆ ತೆಗೆದು ಕೊಂಡರು.
ಇನ್ಸ್‌ಪೆಕ್ಟರ್ ಗಂಗಾಧರ್ ನಾನು ಯಾರೊಂದಿಗೂ ಅಗೌರವದಿಂದ ನಡೆದುಕೊಂಡಿಲ್ಲ.ಉಡಾಫೆಯಿಂದ ಮಾತನಾಡಿಲ್ಲ ಎಂದಾಗ ಕೆಲ ಕಾಲ ಮಾತಿನ ಚಕಮಖಿ ನಡೆದು ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಕೆಲವು ದಾಖಲೆಗಳ ಆಧಾರದ ಮೇಲೆ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತೇನೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ ನಂತರ ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಠಾಣೆಯಿಂದ ಹೊರ ನಡೆದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರಾಜೇಂದ್ರ, ಬಿಜೆಪಿ ಅಧ್ಯಕ್ಷ ಶಂಭೇಗೌಡ, ನರಸಿಂಹೇಗೌಡ, ವೆಂಕಟಸ್ವಾಮಿ, ಎಂ.ಸಿ.ದೊಡ್ಡನಾಯಕ, ಸಿ.ವಿ.ನಾಗರಾಜು, ಮೊತ್ತ ಬಸವರಾಜಪ್ಪ, ಯೋಗನರಸಿಂಹೇಗೌಡ, ಶಾಂತಕುಮಾರ್, ಪುರಸಭಾ ಸದಸ್ಯರಾದ ನಾಗರಾಜು, ನಂಜಪ್ಪ, ಮೆಕಾನಿಕ್ ಸೂರಿ, ವಿವೇಕ್, ಜಿಮ್ ಯಶ್ವಂತ್, ಎಂ.ಡಿ.ಮಂಚಯ್ಯ, ಶಿವಕುಮಾರ್, ರಾಜಣ್ಣ, ನಾಗನಾಯಕ, ನಿಂಗೇಗೌಡ, ರಂಗಪ್ಪ, ಡಿ.ಆರ್.ಮಹೇಶ್ ಸೇರಿದಂತೆ ಮತ್ತಿತರರಿದ್ದರು.
– ಶಿವಕುಮಾರ