ಚಿಕ್ಕಮಗಳೂರು – ನಗರದ ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಚಿತವಾಗಿ ಎರಡು ದಿನಗಳ ಬ್ಯಾಂಕಿಂಗ್ ಪರೀಕ್ಷೆಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಉಲ್ಲಾಸ್ ಇ ಜಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಮುಗಿಸಿ ಭವಿಷ್ಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗದ ಕನಸು ಕಟ್ಟಿಕೊಳ್ಳುವ ಸಂದರ್ಭದಲ್ಲಿ ಯಾವುದೇ ರೀತಿಯ ತರಬೇತಿಯಿಲ್ಲದೆ ಪರೀಕ್ಷೆ ಬರೆಯುತ್ತಿರುವುದನ್ನು ಮನಗಂಡು ಈ ಉಚಿತ ಕಾರ್ಯಾಗಾರವನ್ನು ಆಯೋಜಿಸಿದ್ದು ಸದ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾಭ್ಯಾಸ ಮುಗಿಸಿದ್ದರೂ ಸಹ ಅವಕಾಶ ವಂಚಿತರಾಗಿರುವ ಪ್ರತಿಯೊಬ್ಬರಿಗೂ ಈ ಕಾರ್ಯಾಗಾರ ಬಹಳ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಎರಡು ದಿನದ ಕಾರ್ಯಾಗಾರವನ್ನು ರಾಜ್ಯದ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ತರಬೇತಿ ನೀಡಿ ಜನಮನ್ನಣೆ ಗಳಿಸಿರುವ ಶ್ರೀ ಆರ್.ಕೆ ಬಾಲಚಂದ್ರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪರೀಕ್ಷೆಗಳ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮತ್ತು ಕೆಲಸವನ್ನು ಹುಡುಕುತ್ತಿರುವ ಹಲವರು ತಮ್ಮ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗದ ಕನಸನ್ನು ನನಸು ಮಾಡಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಬಹುತೇಕ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದಿನಾಂಕ ಮಾರ್ಚ್ 24ಮತ್ತು 25ರ ಸೋಮವಾರ ಮತ್ತು ಮಂಗಳವಾರ ಬೆಳಿಗ್ಗೆ 9.30 ರಿಂದ ಸಂಜೆ 5.30ರವರೆಗೆ ನಗರದ ಎಐಟಿ ವೃತದಲ್ಲಿರುವ ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾರ್ಯಾಗಾರ ನಡೆಯಲಿದ್ದು ಆಸಕ್ತರು ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಿಕೊಳ್ಳಬಹುದಾಗಿದೆ.
ಕಾರ್ಯಾಗಾರದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನೋಂದಾಯಿಸಿಕೊಳ್ಳಲು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಸಂಖ್ಯೆ 9483851101, 8197062159