
ಬೇಲೂರು-ಮದ್ಯಪಾನ ಹಾಗು ಇತರ ಮಾರಕ ದುಶ್ಚಟಗಳಿಗೆ ಬಲಿಯಾಗದಿರಲು ಹಾಗು ಅಂತಹ ಚಟಗಳಿಗೆ ಒಳಗಾಗಿದ್ದರು ಸಹ ಅವುಗಳಿಂದ ಹೊರಬಂದು ಆ ಮೂಲಕ ಸಂವಿಧಾನ ಶಿಲ್ಪಿ ಡಾ,ಬಿ.ಆರ್ ಅಂಬೇಡ್ಕರ್ ರವರಿಗೆ ಗೌರವ ಸಲ್ಲಿಸುವ ಮಹತ್ವದ ನಿರ್ಣಯವೊಂದನ್ನು ತಲಗೋಡು ಹಾಗು ಚಟ್ಟಿಗೆ ಮರೂರು ಗ್ರಾಮದ ಯುವಕರು ತೆಗೆದುಕೊಂಡರು.
ಪ್ರತಿ ವರ್ಷವೂ ಬಾಬಾಸಾಹೇಬರ ಜನ್ಮದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿರುವ ಅವಳಿ ಗ್ರಾಮದ ಯುವಕರು ಆ ಸಂದರ್ಭದಲ್ಲಿ ಯಾವುದಾದರೊಂದು ಹೊಸ ನಿರ್ಣಯ ಕೈಗೊಂಡು ಅದನ್ನು ವರ್ಷವಿಡೀ ಪಾಲಿಸುತ್ತಾ ಇತರ ಗ್ರಾಮದ ಯುವಕರಿಗೆ ಮಾದರಿಯಾಗುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
ಈ ವರ್ಷವೂ ಸಹ ಗ್ರಾಮದ ಮುಂಭಾಗದಲ್ಲಿ ಡಾ,ಬಿ.ಆರ್ ಅಂಬೇಡ್ಕರ್ ರವರ ಸಂದೇಶಗಳನ್ನು ಒಳಗೊಂಡ ಬ್ರಹತ್ ಫ್ಲೆಕ್ಸ್ ಅನ್ನು ಅಳವಡಿಸಿ ಹೂವಿನ ಅಲಂಕಾರ ಮಾಡಿ ದೀಪ ಬೆಳಗಿ ಸಂವಿಧಾನ ಶಿಲ್ಪಿಗೆ ಜನ್ಮದಿನದ ಶುಭಾಶಯ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯುವಮುಖಂಡ ಗಿರೀಶ್ ಡಾ,ಬಿ.ಆರ್ ಅಂಬೇಡ್ಕರ್ ರವರು ತೋರಿರುವ ದಾರಿಯಲ್ಲಿ ನಾವುಗಳು ನಡೆಯಬೇಕಿದೆ.ತನ್ನ ಸಮುದಾಯ ಉದ್ದಾರವಾಗಬೇಕು,ಈ ಸಮಾಜದಲ್ಲಿ ಎಲ್ಲರ ನಡುವೆ ಅವರು ತಲೆಯೆತ್ತಿ ನಿಲ್ಲಬೇಕು ಎಂಬ ಕಾರಣಕ್ಕೆ ಸಾಕಷ್ಟು ಅವಕಾಶಗಳನ್ನು ಕೊಟ್ಟು ಹೋಗಿದ್ದಾರೆ.ಅವುಗಳನ್ನು ನಾವೆಲ್ಲ ಸದುಪಯೋಗ ಪಡಿಸಿಕೊಂಡು ಬಾಬಾಸಾಹೇಬರು ಕಂಡ ಕನಸ್ಸುಗಳನ್ನು ಈಡೇರಿಸಲು ಕಾಯ-ವಾಚಾ-ಮನಸ್ಸ ಕಾರ್ಯಮಗ್ನರಾಗಬೇಕಿದೆ ಎಂದು ಕರೆ ನೀಡಿದರು.
ಮುಖಂಡ ಸಂತೋಷ್ ರವಿ ಮಾತನಾಡಿ,ಮದ್ಯಪಾನ ಹಾಗು ಇತರ ದುಶ್ಚಟಗಳಿಗೆ ಒಳಗಾಗಿ ನಮ್ಮ ಸಮುದಾಯದ ಯುವ ಸಮೂಹ ದಾರಿ ತಪ್ಪುತ್ತಿದೆ.ದುಡಿದ ಹಣವನ್ನೆಲ್ಲ ಅದಕ್ಕಾಗಿಯೇ ವ್ಯಯಿಸಿ ಆರ್ಥಿಕವಾಗಿ ಹಿಂದೆ ಉಳಿಯುವುದರ ಜೊತೆಗೆ ತಮ್ಮ ಕುಟುಂಬವನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ.ಡಾ,ಬಿ.ಆರ್ ಅಂಬೇಡ್ಕರ್ ರವರು ತನ್ನ ಸಮುದಾಯದ ಉದ್ಧಾರವನ್ನು ಬಯಸಿದ್ದರು.ಅದಕ್ಕಾಗಿ ಶಿಕ್ಷಣ,ಉದ್ಯೋಗ,ಹಾಗು ಇತರ ಸ್ತರಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ದೊರೆಯುವಂತೆ ನೋಡಿಕೊಂಡಿದ್ದರು.ನಾವುಗಳು ಆ ಎಲ್ಲ ಸವಲತ್ತುಗಳ ಬಳಸಿಕೊಂಡು ಬೆಳೆಯುವ ಮೂಲಕ ಅವರ ಹೆಸರನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು.
ಮದ್ಯಪಾನದಂತಹ ದುಶ್ಚಟಗಳಿಂದ ದೂರವಿದ್ದು ಸಾಧನೆಯ ಹಾದಿಯೆಡೆಗೆ ನಾವುಗಳು ನಡೆಯಬೇಕು.ನಮ್ಮ ಅವಳಿ ಗ್ರಾಮಗಳು ಇಡೀ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.

ಕಾಂಗ್ರೆಸ್ ಯುವ ಮುಖಂಡ ಸಚಿನ್ ಮಾತನಾಡಿ ಇಂದು ನಾವು ತೆಗೆದುಕೊಂಡಿರುವ ಮದ್ಯಪಾನ ವಿರೋಧಿ ನಿರ್ಣಯ ಅತ್ಯಂತ ಮಹತ್ವದ್ದು ಇದನ್ನು ಪಾಲನೆ ಮಾಡುವ ಮೂಲಕ ಡಾ ,ಬಿ.ಆರ್ ಅಂಬೇಡ್ಕರ್ ರವರಿಗೆ ಗೌರವ ಸೂಚಿಸುವ ಕೆಲಸವನ್ನು ಮಾಡೋಣ.ಮದ್ಯಪಾನ ಹಾಗು ಇತರ ದುಶ್ಚಟಗಳಿಗೆ ಬೇರೆ ಸಮುದಾಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ಸಮುದಾಯವೇ ಜಾಸ್ತಿ ಬಲಿಯಾಗಿದ್ದು ನಮ್ಮ ಇಂದಿನ ಹಾಗು ಮುಂದಿನ ಪೀಳಿಗೆಗಳು ಈ ಭೂತಕ್ಕೆ ಬಲಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ತಿಳಿಸಿದರು.
ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.ಈ ಸಂದರ್ಭದಲ್ಲಿ ಅವಳಿ ಗ್ರಾಮಗಳ ಎಲ್ಲ ಗ್ರಾಮಸ್ಥರುಗಳು ಹಾಜರಿದ್ದರು.
———————-ನೂರ್ ಅಹಮ್ಮದ್