ಮಂಡ್ಯ- ಸರ್ಕಾರಿ ಕಚೇರಿಗಳಿಗೆ ಬರುವ ವಿಶೇಷ ಚೇತನರನ್ನು ಗೌರವದಿಂದ ವರ್ತಿಸಿ ಆದ್ಯತೆಯೊಂದಿಗೆ ಅವರ ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಅನುಷ್ಠಾನಗೊಳಿಸಿ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.
ಇಂದು (ಫೆ.21) ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಕಲಚೇತನರ ಕುಂದು ಕೊರತೆಗಳ ಪರೀಶೀಲನ ಸಭೆ ಮತ್ತು ವಿಕಲಚೇತನರ ಉದ್ಯೋಗ ಮೇಳ-2025 ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ವಿಶೇಷಚೇತನರು ಸ್ವಾವಲಂಬಿಗಳಾಗಿ ಬದುಕಲು ಈ ರೀತಿಯ ಕಾರ್ಯಕ್ರಮಗಳು ನಡೆಸುವುದು ಅಗತ್ಯ ಎಂದರು.
ಸುಮಾರು 14 ಕಂಪನಿಗಳು ವಿಶೇಷಚೇತನರಿಗೆ ಮೀಸಲಿರುವ ಉದ್ಯೋಗಗಳನ್ನು ವಿದ್ಯಾರ್ಹತೆಗೆ ಅನುಗುಣವಾಗಿ ನೀಡುತ್ತಿದ್ದಾರೆ, ಈಗಾಗಲೇ 300 ಕ್ಕೂ ಹೆಚ್ಚು ಜನ ನೊಂದಣಿಯಾಗಿದ್ದಾರೆ, ಉದ್ಯೋಗ ಮೇಳದ ಸದುಪಯೋಗವನ್ನು ಎಲ್ಲಾ ವಿಶೇಷ ಚೇತನರು ಪಡೆದುಕೊಳ್ಳಿ ಎಂದು ತಿಳಿಸಿದರು.
ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ವಿಶೇಷ ಚೇತನರಿಗೆ ಕೇವಲ ಅನುಕಂಪ ತೋರಿಸದೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮಾಡಬೇಕು, ವಿಶೇಷಚೇತನರಿಗೆ ದೈಹಿಕವಾಗಿ ಅಂಗವೈಕಲ್ಯ ಇದ್ದರೂ ಸಹ ದೇವರು ಅವರಿಗೆ ವಿಶೇಷ ಚೈತನ್ಯವನ್ನು ನೀಡಿ ಕಳಿಸಿದ್ದಾನೆ, ಅವರ ಚೈತನ್ಯವನ್ನು ಗುರುತಿಸಿ ಚೈತನ್ಯಕೆ ಅನುಗುಣವಾಗಿ ಅವರಿಗೆ ಅವಕಾಶ ನೀಡುವುದು ಅತಿ ಮುಖ್ಯ ಎಂದು ಹೇಳಿದರು.

ವಿಶೆಷಚೇತನರ ಕುಂದು ಕೊರತೆಗಳನ್ನು ಆಲಿಸಿದ ಅವರು ಅಧಿಕಾರಿಗಳಿಗೆ ವಿಶೇಷಚೇತನರ ಅವಹಲುಗಳನ್ನು ಕಾನೂನಾತ್ಮಕವಾಗಲ್ಲದೆ ಮಾನವಿಯತೆ ದೃಷ್ಟಿಯಿಂದ ನೋಡಿ ಹಾಗೂ ಅವರೆಲ್ಲಾರ ಕುಂದು ಕೊರತೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ನಂತರ ಮಾತನಾಡಿದ ನ್ಯಾಯಾಧೀಶರು ಹಾಗೂ ಕಾನೂನು ಸೇವೆ ಸದಸ್ಯ ಕಾರ್ಯದರ್ಶಿಗಳಾದ ಆನಂದ್ ಅವರು ಮಾತನಾಡಿ ವಿಶೇಷಚೇತನರಿಗೆ ಕರುಣೆ ತೊರುವುದನ್ನು ನಿಲ್ಲಿಸಿ ಅವರು ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಹೆಚ್ಚು ಅವಕಾಶಗಳನ್ನು ನೀಡಿ, ಅಂಗವೈಕಲ್ಯ ಹೊಂದಿದ್ದರು ಸಹ ಅನೇಕ ವಿಶೇಷಚೇತನರು ರಾಜ್ಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದಿದ್ದಾರೆ ಹಾಗೂ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಅಂತವರು ಪ್ರೇರಣೆಯಾಗಿ ತೆಗೆದುಕೊಂಡು ನೀವು ಬದುಕಿನಲ್ಲಿ ಸಾಧನೆ ಮಾಡಿ, ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲವು ವಿಶೇಷಚೇತನರಿಗೆ ಸಾಂಕೇತಿಕವಾಗಿ ಶ್ರವಣದೋಷ ಯಂತ್ರಗಳನ್ನು ನೀಡಲಾಯಿತು,
ಕಾರ್ಯಕ್ರಮದಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಂಚಾಲಕಿ ಮೀರಾ ಶಿವಲಿಂಗಯ್ಯ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲ್ಯಾಣಾಧಿಕಾರಿ ಎಸ್.ಎಸ್. ಕೋಮಲ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಸ್.ರಾಜಮೂರ್ತಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.