ಮೈಸೂರು – ಮೈಸೂರಿನ ವರುಣ ಹೋಬಳಿಯ ಚೋರನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಗೋಕಲ್‌ದಾಸ್ ಎಕ್ಸ್ಪೋರ್ಟ್ಸ್ ಫೌಂಡೇಶನ್ ವತಿಯಿಂದ ‘ನಮ್ಮ ನಡಿಗೆ ಸಾಮಾಜಿಕ ಜವಾಬ್ದಾರಿಯ ಕಡೆಗೆ’ ಎಂಬ ಶೀರ್ಷಿಕೆಯಡಿ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸ್ಮಾರ್ಟ್ ಟಿವಿ, ಕಂಪ್ಯೂಟರ್, ಪ್ರಿಂಟರ್ ಹಾಗೂ ಡಿಜಿಟಲ್ ಲೈಬ್ರರಿಯನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮ ಕುರಿತು ಗೋಕಲ್‌ದಾಸ್ ಎಕ್ಸ್ಪೋರ್ಟ್ಸ್ ಫೌಂಡೇಶನ್‌ನ ಜನರಲ್ ಮ್ಯಾನೇಜರ್ ಮಹಾಂತೇಶ್ ಬಂಗಾರಿ ಮಾತನಾಡಿ, ಇಂದು ನಾವು ಹಸ್ತಾಂತರ ಮಾಡಿರುವ ಸ್ಮಾರ್ಟ್ ಟಿವಿಯಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಎಲ್ಲಾ ಪಠ್ಯಪುಸ್ತಕಗಳನ್ನು ಅಪ್ಲೋಡ್ ಮಾಡಲಾಗಿರುತ್ತದೆ. ಇದರಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಮತ್ತು ಕಲಿಕೆಯಲ್ಲಿ ಹೊಸ ಅನುಭವ ನೀಡುತ್ತದೆ. ಇಲ್ಲಿಯವರೆಗೆ ಶಿಕ್ಷಕರು ಬೋರ್ಡ್ ಬಳಸಿ ಆಯಾಯ ಪಠ್ಯಕ್ರಮಗಳ ಬಗ್ಗೆ ವಿವರಿಸುತ್ತಿದ್ದರು. ಆದ್ದರಿಂದ ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅನುಕೂಲವಾಗಲೆಂದು ಈ ರೀತಿಯ ವಿಶೇಷ ಮಾದರಿಗಳನ್ನು ಅಳವಡಿಕೆ ಮಾಡಲಾಗಿದೆ. ಇದರಲ್ಲೇ ಈ-ಬುಕ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅಭಿಪ್ರಾಯಿಸಿದರು.

ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಪ್ರಗತಿ ಹೊಂದಲಿ ಹಾಗೂ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಲಿ ಎಂದು ಹಿತನುಡಿ ತಿಳಿಸಿದರು. ವೇದಿಕೆಯಲ್ಲಿ ಗೋಕಲ್‌ದಾಸ್ ಎಕ್ಸ್ಪೋರ್ಟ್ಸ್ ಸಂಸ್ಥೆಯ ಗಣ್ಯರಾದ ಶಂಕರ್, ನಾಗರಾಜ ಕೆ.ಪಿ., ಸಿದ್ದೇಶ್ವರಗೌಡ, ರಾಜೇಂದ್ರ, ಭಾಸ್ಕರ್, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.