ಮೂಡಿಗೆರೆ-ತಾಲ್ಲೂಕಿನ ಗೋಣಿಬೀಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಸುಜಾತ ಗಣೇಶ್ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ಪಂಚಾಯಿತಿ ಸಭಾಂಗಣದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸುಜಾತ ಹೊರತುಪಡಿಸಿ ಬೇರ್ಯಾವ ಉಮೇದುವಾರಿಕೆ ಸಲ್ಲಿಕೆಯಾಗದ ಕಾರಣ ಚುನಾವಣಾಧಿಕಾರಿ ಹೆಚ್.ಎನ್.ಸುಮ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಬಳಿಕ ಮಾತನಾಡಿದ ನೂತನ ಉಪಾಧ್ಯಕ್ಷೆ ಸುಜಾತ ಗಣೇಶ್ ಸರ್ಕಾರದಿಂದ ದೊರೆಯುವ ಅನುದಾನವನ್ನು ಜಾತಿ ತಾರತಮ್ಯವೆಸಗದೇ ಸರ್ವರಿಗೂ ಉತ್ತಮ ಸೇವೆ ಒದಗಿಸಲು ಮುಂದಾಗುತ್ತೇನೆ.ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ಬಹಳಷ್ಟು ಅವಶ್ಯವಿದೆ ಎಂದರು.
ದಸoಸ ಮುಖಂಡ ಸುಂದ್ರೇಶ್ ಹೊಯ್ಸಳಲು ಅಭಿನಂದಿಸಿ ಮಾತನಾಡಿ,ಪಂಚಾಯಿತಿಯಲ್ಲಿ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ಎಲ್ಲವೂ ಅನುಕೂಲವಾಗಿದೆ. ನೂತನ ಉಪಾಧ್ಯಕ್ಷರು ರಸ್ತೆ ಸೇರಿದಂತೆ ಶುದ್ಧ ಕುಡಿಯುವ ನೀರಿಗೆ ಹೆಚ್ಚು ಆದ್ಯತೆ ನೀಡಿ ಗ್ರಾಮಸ್ಥರಿಗೆ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ದಿನೇಶ್, ಸದಸ್ಯರುಗಳಾದ ಮಹೇಶ್, ಆನಂದ್, ರಾಧಾ ಮಿತ್ರೇಶ್, ಭಾರತಿ ಪ್ರಕಾಶ್, ರೇಣುಕಾ, ಪ್ರಹ್ಲಾದ್, ವಿಜೇಂದ್ರ, ದೀಪಕ್, ಚಂದ್ರಶೇಖರ್, ಸುಧಾಮಣಿ, ಸುಜಾತ, ಶರತ್, ಮಹೇಶ್, ಕೃಷ್ಣಪ್ಪ, ಸೌಭಾಗ್ಯ, ರಘು, ಜುಬೇಧ ಮತ್ತಿತರರಿದ್ದರು.