ಚಿಕ್ಕಮಗಳೂರು-ಹೊರನಾಡಿನಲ್ಲಿ ವೆಂಕಟಸುಬ್ಬಾ ಜೋಯಿಸ್ ಮತ್ತು ನರಸಮ್ಮ ಸ್ಮರಣೆ- ರಾಜ್ಯಪಾಲರಿಂದ ಕಂಚಿನ ಪುತ್ಥಳಿ ಅನಾವರಣ

ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಹೊರನಾಡು ಶ್ರೀ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದ ಆವರಣದಲ್ಲಿ, ಹಿರಿಯ ಧರ್ಮಕರ್ತ ದಿ.ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ನರಸಮ್ಮ ಜೋಯಿಸ್ ಅವರ ಕಂಚಿನ ಪುತ್ಥಳಿಗಳನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಗುರುವಾರ ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ನಡೆದ ಗ್ರಾಮೀಣಾಭಿವೃದ್ದಿ ಯೋಜನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯಪಾಲರು, ಕನ್ನಡದಲ್ಲಿ ಮಾತನಾಡಿ, “ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ” ಎಂಬುವ ಮೂಲಕ ಸಾರ್ವಜನಿಕರ ಪ್ರಶಂಸೆ ಪಡೆದರು. ಅವರು ಮಾತನಾಡುತ್ತಾ, “ಜೋಯಿಸ್ ದಂಪತಿಯ ವ್ಯಕ್ತಿತ್ವ ಹಾಗೂ ಅವರ ಕಾಲಜ್ಞಾನವು ಪ್ರಶಂಸನೀಯ. ಈ ಪುತ್ಥಳಿಯ ಅನಾವರಣ ಮಾಡಿರುವುದು ನನ್ನ ಪುಣ್ಯ” ಎಂದರು.

ಕೇಂದ್ರದ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಶ್ರೀ ಕ್ಷೇತ್ರದ ಪವಿತ್ರತೆಯನ್ನು ಉಲ್ಲೇಖಿಸುತ್ತಾ, “ಇದು ಭದ್ರಾ ನದಿಯ ತಟದಲ್ಲಿರುವ ಭವ್ಯ ತೀರ್ಥ ಕ್ಷೇತ್ರ. ದೇವಾಲಯಗಳು ಮಾತ್ರ ಪೂಜಾ ಕೇಂದ್ರಗಳಲ್ಲ; ಇವು ಜನೋಪಯೋಗಿ ಕಾರ್ಯಗಳಲ್ಲಿ ಸಹ ತೊಡಗಿಸಬೇಕಾಗಿವೆ” ಎಂದು ಹೇಳಿದರು.

ಈ ವೇಳೆ ‘ಅನ್ನಪೂರ್ಣ ಪಾದಸೇವಾ ದುರಂಧರ’ ಎಂಬ ಪುಸ್ತಕವನ್ನು ಹರಿಹರ ಪೀಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು.

ಕ್ಷೇತ್ರದ ಧರ್ಮಕರ್ತ ಜಿ.ಭೀಮೇಶ್ವರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, “ಅಜ್ಜಜ್ಜಿಯ ಆದರ್ಶಗಳು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿ ಎಂಬ ಉದ್ದೇಶದಿಂದ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಸೇನೆಗೆ ₹10 ಲಕ್ಷಗಳ ಚೆಕ್ ನೀಡಲಾಯಿತು. ಗ್ರಾಮೀಣಾಭಿವೃದ್ದಿ ಯೋಜನೆಯಡಿಯಲ್ಲಿ ಉಚಿತ ಹೆಂಚುಗಳು, ವಿದ್ಯುತ್ ಸಂಪರ್ಕ ಪತ್ರ, ಕೃಷಿ ಉಪಕರಣಗಳು ಹಾಗೂ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಹೊಲಿಗೆ ಯಂತ್ರಗಳ ವಿತರಣೆಯಂತ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕಿ ನಯನಾ ಮೋಟಮ್ಮ, ಸಿ.ಟಿ. ರವಿ, ಮಾಜಿ ಸಚಿವೆ ಮೋಟಮ್ಮ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?