ಎಚ್.ಡಿ.ಕೋಟೆ-ತಾಲೂಕಿನ ಗುಂಡ್ರೆ ಅರಣ್ಯ ವಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಶಶಾಂಕ್ ಮತ್ತು ರಾಜು ಎಂಬುವರು ಅರಣ್ಯದಲ್ಲಿ ಗಸ್ತು ಮಾಡುತ್ತಿರುವಾಗ ಸಂಜೆ ಸುಮಾರು ಐದು ಗಂಟೆ ಸಮಯದಲ್ಲಿ ಕೊಳವಳ್ಳಿ ಕೂಡು ಕನ್ನೆಗಾಲ ಹೊಳೆಯ ಪಕ್ಕದಲ್ಲಿ ಹಠಾತ್ತನೆ ಒಂಟಿ ಸಲಗ ದಾಳಿ ಮಾಡಿದೆ.
ದಿಢೀರ್ ದಾಳಿ ಮಾಡಿದ ಸಲಗ ಶಶಾಂಕ್ ಗೆ ಸೊಂಡಿಲಿನಿಂದ ಬಲಭಾಗದ ಬೆನ್ನಿಗೆ ತಿವಿದು ಪಕ್ಕದ ಹೊಳೆಗೆ ನೂಕಿದೆ.ಬಲವಾದ ಪೆಟ್ಟು ಬಿದ್ದ ಪರಿಣಾಮ ಶಶಾಂಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕಳೆದ ನಾಲ್ಕು ತಿಂಗಳಿಂದ ಅರಣ್ಯ ಇಲಾಖೆಯಲ್ಲಿ ಆನೆ ಕಾವಲು ಪಡೆಯ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಕಾಳಯ್ಯನಹಳ್ಳದ ಚಂದ್ರು ಮತ್ತು ಪ್ರೇಮ ರವರ ಪುತ್ರ ಶಶಾಂಕ್ ನ ಈ ರೀತಿಯ ಸಾವು ಮನಕಲಕುವಂತಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅನಿಲ್ ಚಿಕ್ಕಮಾದು ಕುಟುಂಬಕ್ಕೆ ಸಾಂತ್ವಾನ ಹೇಳಿ ಐದು ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ಅನ್ನು ನೀಡಿ ಮುಂದಿನ ಪ್ರಕ್ರಿಯೆ ಮುಗಿದ ನಂತರ ವಿಮೆ ಹಣ ಹದಿನೈದು ಲಕ್ಷ ಇಲಾಖೆಯಿಂದ ಉಳಿಕೆ ಹತ್ತು ಲಕ್ಷ ಮತ್ತು ಶಶಾಂಕ್ ತಂಗಿಗೆ ಇಲಾಖೆಯಲ್ಲಿ ಕಂಪ್ಯೂಟರ್ ಕೆಲಸ ಕೂಡಿಸುವುದಾಗಿ ಭರವಸೆ ನೀಡಿದ್ದಾರೆ.
——–ಶಿವು ಕೋಟೆ