ಎಚ್.ಡಿ.ಕೋಟೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಬೇಸಿಗೆ ಆರಂಭದಲ್ಲಿ ತಾಲೂಕಿನ ಅಲ್ಲಲ್ಲಿ ಸುರಿದ ಅಕಾಲಿಕ ಮಳೆಗೆ ಕಟ್ಟೆ ಮನುಗನಹಳ್ಳಿ ಗ್ರಾಮದ ರೈತ ಎರಡು ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ನೆಲಕ್ಕಚ್ಚಿದೆ.
ರೈತ ಹರೀಶ್ ಬೆಳೆದಿದ್ದ ನೇಂದ್ರ ಬಾಳೆ ಸದ್ಯದಲ್ಲಿಯೇ ಕಟಾವಿಗೆ ಬರುವ ಹಂತ ತಲುಪಿತ್ತು. ಆದರೆ, ಮಂಗಳವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಬಾಳೆ ಸಂಪೂರ್ಣ ನೆಲಕ್ಕಚ್ಚಿರುವುದರಿಂದ ರೈತ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.
ವಿಷಯ ತಿಳಿದ ರಾಜ್ಯ ರೈತ ಕಲ್ಯಾಣ ಸಂಘಟನೆಯ ರಾಜ್ಯಾಧ್ಯಕ್ಷ ಭೂಮಿಪುತ್ರ ಚಂದನ್ ಗೌಡ ರೈತನ ನೆರವಿಗೆ ಧಾವಿಸಿ ವೈಯಕ್ತಿಕ ಸಹಾಯ ಮಾಡಿ, ತಾಲೂಕಿನ ಕೃಷಿ ಅಧಿಕಾರಿ ಹಾಗೂ ತಹಸೀಲ್ದಾರ್ ಶ್ರೀನಿವಾಸ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸರ್ಕಾರದಿಂದ ದೊರೆಯುವ ಪರಿಹಾರವನ್ನು ತ್ವರಿತಗತಿಯಲ್ಲಿ ಸಂತ್ರಸ್ತ ರೈತನಿಗೆ ತಲುಪಿಸುವಂತೆ ಮನವಿ ಮಾಡಿದರು.
ಗ್ರಾಮಲೆಕ್ಕಾಧಿಕಾರಿ ಹಾಗೂ ಕೃಷಿ ಅಧಿಕಾರಿಗಳಿಂದ ವರದಿ ತರೆಸಿಕೊಂಡು ಸರ್ಕಾರದಿಂದ ಬರುವ ಪರಿಹಾರವನ್ನು ಆದಷ್ಟು ಬೇಗ ರೈತನಿಗೆ ನೀಡಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.

ರೈತ ಕಲ್ಯಾಣ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಮಂತ್, ಜಿಲ್ಲಾಧ್ಯಕ್ಷ ಅನಿಲ್, ರಾಜ್ಯಮಟ್ಟದ ಪದಾಧಿಕಾರಿ ಮನು, ತಾಲೂಕು ಅಧ್ಯಕ್ಷ ಉಮೇಶ್, ಸುರೇಶ್, ಜಯಕುಮಾರ್, ವನಸಿರಿ ಶಂಕರ್, ಶ್ರೀಕಂಠ, ಆಲ್ತಾಲ್ ಹುಂಡಿ ಮಹದೇವಸ್ವಾಮಿ. ಹರೀಶ್, ಆನಂದ, ಚಲುವರಾಜು ಚಲುವರಾಜ್ ಇದ್ದರು.
- ಶಿವು ಕೋಟೆ