ಹೆಚ್ ಡಿ ಕೋಟೆಯಲ್ಲಿ ತರೇಹವಾರಿ ಗಣೇಶನ ಮೂರ್ತಿಗಳು-ಭರ್ಜರಿ ಹಬ್ಬ ಆಚರಿಸುವ ತವಕದಲ್ಲಿ ನಾಗರೀಕರು

ಎಚ್.ಡಿ.ಕೋಟೆ:ಹಿಂದೂಗಳ ಪವಿತ್ರ ಹಬ್ಬ ಗೌರಿ-ಗಣೇಶ ಚತುರ್ಥಿ ಹಿನ್ನಲೆಯಲ್ಲಿ ತಾಲೂಕಿನ ವಿವಿದೆಡೆ ಗೌರಿ ಹಾಗು ಗಣೇಶ ಮೂರ್ತಿಗಳು ಆಗಮಿಸಿವೆ.

ಹ್ಯಾಂಡ್ ಪೋಸ್ಟ್‌,ಮಾನಂದವಾಡಿ ಮುಖ್ಯ ರಸ್ತೆ,ಸರಗೂರು ಮುಖ್ಯರಸ್ತೆ,ಮೈಸೂರು ಮುಖ್ಯರಸ್ತೆ,ಸರಗೂರು,ಹೆಚ್‌.ಡಿ.ಕೋಟೆ ಪಟ್ಟಣ,ಅಂತರಸಂತೆ,ಹೊಮ್ಮರಗಳ್ಳಿ,ಹಂಪಾಪುರ ಗ್ರಾಮಗಳ ಗಣೇಶ ಮೂರ್ತಿ ವ್ಯಾಪಾರಿಗಳು ತರೇಹವಾರಿ ಮೂರ್ತಿಗಳನ್ನು ಕೊಂಡು ತಂದಿದ್ದಾರೆ.

ಈ ಬಾರಿ ವಿಶೇಷವಾಗಿ ತಯಾರಿಸಲಾಗಿರುವ ಆದರ್ಶ ಪುರುಷ ಶ್ರೀರಾಮನ ಜನ್ಮಸ್ಥಳ ಅಯೋಧ್ಯೆಯ ಶ್ರೀರಾಮನ ದೇವಾಲಯದಲ್ಲಿ ಕುಳಿತಿರುವ ಗಣೇಶ ಮೂರ್ತಿಗಳು ಎಲ್ಲರ ಗಮನಸೆಳೆಯುತ್ತಿವೆ.

ಇದರ ಜೊತೆಗೆ ಚಲನಚಿತ್ರನಟ ದಿ.ಡಾ.ಪುನೀತ್ ರಾಜಕುಮಾರ್ ರ ಗಣೇಶ ಮೂರ್ತಿ,ಶಿವನ ವಾಹನ ನಂದಿಯ ಮೇಲೆ ಕುಳಿತಿರುವ ಗಣೇಶ,ಕಮಲದ ಮೇಲೆ ಕುಳಿತಿರುವ ಗಣೇಶ,ಆಮೆಯ ಮೇಲೆ ಕುಳಿತಿರುವ ಗಣೇಶ,ನವಿಲಿನ ಮೇಲೆ ಕುಳಿತಿರುವ ಗಣೇಶ ಸೇರಿದಂತೆ ಹಲವು ಬಗೆಯ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿವೆ.

ಕೋವಿಡ್ ನ ಕಾರಣಕ್ಕೆ ಕಳೆದ ವರ್ಷ ಗಣೇಶೋತ್ಸವದ ಸಡಗರ ಅಷ್ಟಿರಲಿಲ್ಲ.ಗಣೇಶ ಮೂರ್ತಿ ವ್ಯಾಪಾರಿಗಳಿಗೂ ಸಹ ಆ ಕಾರಣಕ್ಕೆ ಹೇಳಿಕೊಳ್ಳುವಂತಹ ವ್ಯಾಪಾರವು ನಡೆದಿರಲಿಲ್ಲ.ಈ ಬಾರಿ ಸಂಕಷ್ಟರ ಗಣಪನ ದಯೆಯಿಂದ ಉತ್ತಮ ಮಳೆ ಬೇಳೆಯೊಂದಿಗೆ ಹಳ್ಳಿಗಳು ಸಮೃದ್ಧವಾಗಿದ್ದು ಗಣೇಶನನ್ನು ಕೂರಿಸಲು ಜನ ಮುಗಿಬಿದ್ದಿದ್ದಾರೆ.ಈ ಮೂಲಕ ವ್ಯಾಪಾರಿಗಳು ಒಂದಷ್ಟು ಲಾಭಾಂಶ ಮಾಡಿಕೊಳ್ಳಬಹುದು ಎಂಬ ಆಸೆಯಲ್ಲಿದ್ದಾರೆ.

ತಾಲೂಕಿನ ಗ್ರಾಮಗಳ ವಿವಿಧ ಗೌರಿ ಗಣೇಶ ಸಮಿತಿಯವರು ಆಕರ್ಷಕ, ತಮ್ಮ ಮನಕ್ಕೊಪ್ಪುವ ರೂಪದ ಗಣೇಶನ ಮೂರ್ತಿಗಳ ಮುಂಗಡ ಕಾಯ್ದಿರಿಸುತ್ತಿದ್ದು ಗಣೇಶ ಉತ್ಸವ ಬಾರಿ ರಂಗೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಇನ್ನು ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಹಣ್ಣುಗಳ ಬೆಲೆ ಅದರಲ್ಲೂ ವಿಶೇಷವಾಗಿ ಪುಟ್ಟಬಾಳೆ ಹಣ್ಣಿನ ದರ ಗಗನಕ್ಕೇರಿದೆ,ಹಬ್ಬದ ಹತ್ತಿರಕ್ಕೆ ಬೆಲೆ ಇನ್ನು ಹೆಚ್ಚಾಗುವ ಸಾಧ್ಯತೆಗಳಿವೆ.

ಯಾವುದರ ಬೆಲೆ ಎಷ್ಟು ಹೆಚ್ಚಾದರೂ ಸಾರ್ವಜನಿಕರು ಕೊಳ್ಳುವಿಕೆಯಲ್ಲಿ ಹಿಂದೆ ಬಿದ್ದಿಲ್ಲ.ಈಗಾಗಲೇ ಹಬ್ಬಕ್ಕೆ ಹೊಸ ಬಟ್ಟೆಗಳ ಖರೀದಿಯಲ್ಲಿ ತೊಡಗಿದ್ದು ಸಡಗರ ಸಂಭ್ರಮದಿಂದ ಹಬ್ಬವನ್ನು ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

-ವರದಿ- ಶಿವು ಕೋಟೆ
ಫೋನ್ : 7411991888

Leave a Reply

Your email address will not be published. Required fields are marked *

× How can I help you?