ಎಚ್.ಡಿ.ಕೋಟೆ: ಪಟ್ಟಣದಲ್ಲಿ ಆಗಿಂದಾಗೆ ಕಳ್ಳತನ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಜನತೆ ಆತಂಕಕ್ಕೀಡಾಗಿದ್ದಾರೆ.
ಕಳೆದ ರಾತ್ರಿ ಪಟ್ಟಣದ ವಿಜಯ ಬ್ಯಾಂಕ್ ಹತ್ತಿರದ ಹಾಗೂ ಕೃಷ್ಣಪುರ ಸರ್ಕಲ್ ಸಮೀಪದ ಲ್ಲಿರುವ ಸರ್ಕಾರಿ ಸ್ವಾಮ್ಯದ ಮದ್ಯದಂಗಡಿಗಳಲ್ಲಿ ಏಕಕಾಲದಲ್ಲಿ ಕಳ್ಳತನವಾಗಿದ್ದು, ಹಣದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಕಳೆದ ರಾತ್ರಿ ಮಳಿಗೆಗಳ ಬಾಗಿಲು ಒಡೆದ ಕಳ್ಳರು ಡ್ರಾನಲ್ಲಿದ್ದ ಹಣಕದ್ದಿದ್ದಲದೇ, ಮದ್ಯದ ಬಾಟಲಿಗಳನ್ನು ಚೆಲ್ಲಾಪಿಲ್ಲಿಮಾಡಿ ಪರಾರಿಯಾಗಿದ್ದಾರೆ.
ಕಳೆದ ವಾರವಷ್ಠೇ ಜೆ.ಎಸ್.ಎಸ್ ಕಲ್ಯಾಣ ಮಂಟಪ ಸಮೀಪದ ಮುಖೇಶ್ ಎಂಬುವವರಿಗೆ ಸೇರಿದ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಕಳ್ಳತನಮಾಡಿ 18 ಸಾವಿರ ನಗದು ದೋಚಿ ಕಳ್ಳರು ಕಾಲ್ಕಿತ್ತಿದ್ದರು. ವಾರ ಮಾಸುವ ಮುನ್ನವೇ ಒಂದೇ ದಿನ ಎರಡು ಕಳ್ಳತನ ಪ್ರಕರಣ ಬೆಳಕಿಗೆ ಬಂದಿರುವುದು ಪಟ್ಟಣದ ಜನರ ನಿದ್ದೆಗೆಡಿಸುತ್ತಿದೆ.

ಪೊಲೀಸರಿಗೆ ಸವಾಲಾಗಿರುವ ಕಳ್ಳತನ ಪ್ರಕರಣಗಳು:-
ಪೊಲೀಸ್ ಠಾಣೆ ಸಮೀಪದ ಚಾಮುಂಡೇಶ್ವರಿ ದೇವಾಲಯದಲ್ಲಿ ಕಳೆದ ವರ್ಷ ಕಳ್ಳತನ ಮಾಡಿ ಹುಂಡಿಯೊಂದಿಗೆ ದೇವರ ಚಿನ್ನದ ತಾಳಿ ದೋಚಿ ಕಳ್ಳರು ಪರಾರಿಯಾಗಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಹತ್ತಿರದ ನಿವಾಸವೊಂದರಲ್ಲಿ ನಾಲ್ಕೈದು ದಿನಗಳಿಂದ ಯಾರೂ ಇಲ್ಲದನ್ನ ಅರಿತಿದ್ದ ಕಳ್ಳರು ಹಿಂಬಾಗಿಲಿನ ಬೀಗ ಮುರಿದು ಹಣ, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದರು. ಭಾನುವಾರ ರಜಾ ದಿನವಾದ್ದರಿಂದ ಕ್ರಿಕೆಟ್ ಆಡುತ್ತಿದ್ದ ಮಕ್ಕಳ ಟೆನಿಸ್ ಬಾಲ್ ಕಳ್ಳತನವಾಗಿದ್ದ ಮನೆ ಹತ್ತಿರ ಬಿದ್ದಿದೆ, ಚೆಂಡು ತರಲು ಹೋದ ಯುವಕ ಬಾಗಿಲು ಮುರಿದಿರು ವುದನ್ನು ಗಮನಿಸಿ ವಿಷಯ ಮುಟ್ಟಿಸಿದಾಗ, ಪೊಲೀಸರು ಹಾಗೂ ಸಾರ್ವಜನಿಕರು ಪರಿಶೀಲಿಸಿದ್ದಾರೆ.
ಮೈಸೂರಿನಿಂದ ಶ್ವಾನದಳ ಹಾಗೂ ಬೆರಳಚ್ಚು ತಂಡದವರು ಪರಿಶೀಲಿಸಿದರೂ ಇಲ್ಲಿಯವರೆಗೂ ಕಳೆದ ವರ್ಷದ ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿರುವ ಪೊಲೀಸರ ನಡೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಅಲ್ಲದೇ, ಕಳ್ಳರಿಂದ ಪಟ್ಟಣದ ಜನತೆಯಲ್ಲಿ ಭಯದ ವಾತಾವರಣವಿದೆ. ಇದೀಗ ಒಂದೇ ವಾರದಲ್ಲಿ ಮೂರು ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿರುವುದರಿಂದ ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.

ಇನ್ನೂ ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಚಿಕ್ಕನಾಯಕ ಮಾತನಾಡಿ, ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ವಿವಿಧ ಆಯಾಮಗಳಲ್ಲಿ ತನಿಖೆ ತೀವ್ರಗೊಳಿಸಿ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
-ಶಿವಕುಮಾರ ತುಂಬಸೋಗೆ