ಹೆಚ್.ಡಿ.ಕೋಟೆ-ಸುದೀರ್ಘ ಇತಿಹಾಸ ಮತ್ತು ಪ್ರಾಚೀನತೆಯನ್ನು ಹೊಂದಿರುವ ನಮ್ಮ ಕನ್ನಡ ಭಾಷೆಯನ್ನು ಇಂದಿನ ಆಧುನಿಕ ಯುಗದಲ್ಲಿ ಪೋಷಿಸಿ ಬೆಳೆಸಿ ಎಂದು ಹೇಳುವ ಸ್ಥಿತಿ ಬಂದೊದಗಿರುವುದು ಬೇಸರದ ಸಂಗತಿಯಾಗಿದೆ ಎಂದು ಮೈಸೂರಿನ ನಟರಾಜ ಮಹಿಳ ಪ್ರಥಮ ದರ್ಜೆ ಕಾಲೇಜಿನ ಮುಖ್ಯಸ್ಥ ಡಾ.ಜಿ. ಪ್ರಸಾದ್‌ಮೂರ್ತಿ ತಿಳಿಸಿದರು.
ಅವರು ಪಟ್ಟಣದ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಮಾಧ್ಯಮ ವಿಭಾಗದ ವತಿಯಿಂದ ಬುಧವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಯಾವುದೇ ಭಾಷೆಯನ್ನು ಬಳಸಿ,ಆಯಾ ಭಾಷೆಗೆ ಇರುವ ಗೌರವವನ್ನು ಕೊಡಬೇಕು.ಆದರೆ ಬೇರೆ ಭಾಷೆಯ ಗುಂಗಿನಲ್ಲಿ ಕನ್ನಡಕ್ಕೆ ದೊರೆಯುವ ಗೌರವ ದೊರೆಯುತ್ತಿಲ್ಲ’ ಎಂದರು.
ನವ ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿಯೂ ಸಹ ಭಾಷೆಗೆ ಕುತ್ತು ಬಂದೊದಗಿದೆ. ಖಾಸಗೀಕರಣದ ನೆಪದಲ್ಲಿ ಐ.ಟಿ-ಬಿ.ಟಿ ಕಂಪನಿಗಳು ಸ್ಥಳೀಯ ಭಾಷೆಯನ್ನು ತಾತ್ಸಾರ ಮಾಡಿ, ಬೇರೆ ಬೇರೆ ಭಾಷೆಯನ್ನು ಬಳಸುತ್ತಿದ್ದಾರೆ.ಇದನ್ನುಪ್ರಶ್ನಿಸುವ ಗೋಜಿಗೆ ಯಾರು ಹೋಗಿಲ್ಲ.
ಕನ್ನಡವನ್ನು ಪುನರ್ ಕಟ್ಟುವ ಯೋಜನೆ ಹಾಕಿಕೊಂಡು ಹಂಪಿಯಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾದರೂ ಸಹ ಹಣದ ತೊಂದರೆಯಿಂದಾಗಿ,ಇಚ್ಛಾಶಕ್ತಿಯ ಕೊರತೆಯಿಂದಾಗಿ, ಅಧ್ಯಯನ ನಡೆಯದೆ ಕೇವಲ ಸ್ಥಾವರವಾಗಿ ಉಳಿದಿದೆ ಎಂದು ನೋವನ್ನು ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿ ಸದಸ್ಯ ಜಿ. ವೆಂಕಟಾಚಲ ಮಾತನಾಡಿ, ‘ಕನ್ನಡ ಏಕೀಕರಣ ಹೋರಾಟ ಹೊಯ್ಸಳರ ಕಾಲದಿಂದಲೇ ಹುಟ್ಟಿಕೊಂಡಿತ್ತು.ಅದರ ನಂತರವೂ 1500 ವರ್ಷಗಳ ನಂತರ ಕರ್ನಾಟಕ ಏಕೀಕರಣಗೊಂಡಿದೆ ಎಂದರು.
ಜ್ಞಾನಪೀಠ ಪಡೆದ ಬೇರೆ ಭಾಷೆಗಳ ಕವಿಗಳಿಗೆ ಕನ್ನಡ ಕವಿಗಳಿಗೆ ಹೋಲಿಸಿದರೆ 20 ಕ್ಕೂ ಹೆಚ್ಚಿನ ಇಲ್ಲಿನ ಕವಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕಿತ್ತು ಅದರದು ವಿವಿಧ ಕಾರಣಗಳಿಂದ ಸಾಧ್ಯವಾಗದೆ ಹೋಗಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಜೆ.ಎನ್. ವೆಂಕಟೇಶ್ ಮಾತನಾಡಿದರು.
ಕನ್ನಡ ಐಚ್ಛಿಕ ವಿಷಯದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಎನ್. ವೆಂಕಟೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಕನ್ನಡ ಪ್ರಮೋದ್, ಮಹಾರಾಜ ಕಾಲೇಜಿ ವಿಶ್ರಾಂತ ಪ್ರಾಧ್ಯಾಪಕ ಪ್ರೋ. ಚಂದ್ರೇಗೌಡ, ಎ.ಸಿ.ಭೈರಪ್ಪ, ರವಿಕುಮಾರ್, ರಾಜೇಶ್, ಮಹೇಂದ್ರ, ಬಾಲಚಂದ್ರ, ಸಿದ್ದೇಗೌಡ, ಕಲ್ಲೇಶ್‌ಗೌಡ, ಸಿದ್ದರಾಜು, ಚನ್ನಕೇಶವ, ಮಂಜು, ಮಹೇಶ್,ಅಭಿನಾ, ಚಿತ್ರ, ಪ್ರೀತಿ, ಚಂದನಾ ಇದ್ದರು.
————–ಶಿವು ಕೋಟೆ