ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯು ಗದ್ದಲ, ಕೋಲಾಹಲದಿಂದ ಕೂಡಿತ್ತು. ಸಭೆಯ ಪ್ರಾರಂಭದಿಂದ ಶುರುವಾದ ಗದ್ದಲ ಕೆಲವೊಂದು ವಿಷಯಗಳು ಪ್ರಸ್ತಾಪವಾದಾಗ ಕೋಲಾಹಲಕ್ಕೆ ಕಾರಣವಾಗಿತ್ತು.
ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್ ವಿರುದ್ಧ ಹರಿಹಾಯ್ದ ಸದಸ್ಯರು ಸಭೆ ಕರೆಯಲು ಏಳು ದಿನಗಳ ಮುಂಚಿತವಾಗಿ ಸದಸ್ಯರಿಗೆ ಮಾಹಿತಿ ನೀಡಬೇಕು. ನೀವು ಕೇವಲ ಎರಡು ದಿನಗಳಲ್ಲಿ ಮಾಹಿತಿ ನೀಡಿ ಸಭೆ ಸೇರಿಸಿರುವ ಉದ್ದೇಶವೇನು ಎಂದು ಎಲ್ಲ ಸದಸ್ಯರು ಏರು ಧ್ವನಿಯಲ್ಲಿ ಹರಿಹಾಯ್ದರು.
ಕಳೆದ 8 ತಿಂಗಳುಗಳಿಂದ ಅಧ್ಯಕ್ಷರು ಇಲ್ಲದ ಕಾರಣ ಸಭೆ ಸೇರಲು ತೊಡಕಾಗಿತ್ತು. ಅಂದಿನ ಅವಧಿಯಲ್ಲಿ ನಡೆದ ಕಾಮಗಾರಿಗಳು ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದಾರೆ. ಅಂದಿನ ನಿರ್ಣಯಗಳಿಗೆ ಇಂದಿನ ಸದಸ್ಯರು ಅನುಮೋದನೆ ನೀಡುವುದು ಎಷ್ಟು ಸರಿ ಎಂದು ಸದಸ್ಯ ಐಡಿಯಾ ವೆಂಕಟೇಶ್ ಕಿಡಿಕಾರಿದರು.

ಉಳಿತಾಯ ಹಣ ದುರುಪಯೋಗದ ಶಂಕೆ: ಕಳೆದ ಒಂದೂವರೆ ವರ್ಷಗಳಿಂದ ಅಧ್ಯಕ್ಷರು ಉಪಾಧ್ಯಕ್ಷರು ಇಲ್ಲದ ಕಾರಣ ಸಭೆಗಳನ್ನು ಕರೆದಿರಲಿಲ್ಲ. ಹಿಂದಿನ ಸಭೆಯ ವೇಳೆಗೆ 3.15ಕೋಟಿ ಹಣವನ್ನು ಉಳಿತಾಯ ಮಾಡಲಾಗಿತ್ತು. ಚುನಾಯಿತರು ಇಲ್ಲದ ಕಾರಣ ಪುರಸಭಾ ಮುಖ್ಯಾಧಿಕಾರಿ ಪಿ.ಸುರೇಶ್ ಈ ಹಣವನ್ನು ದುರುಪಯೋಗ ಮಾಡಿಕೊಂಡಿರಿವ ಬಗ್ಗೆ ಅನುಮಾನವಿದೆ. ಇದರ ಬಗ್ಗೆ ತನಿಖೆ ನಡೆಯಬೇಕು. ಚುನಾಯಿತರಾದ ನಮ್ಮ ಅವಧಿ ಕೇವಲ 6 ತಿಂಗಳು ಇರುವುದರಿಂದ ಅಭಿವೃದ್ದಿಗೆ ಹೆಚ್ಚಿನ ವೇಗ ನೀಡಬೇಕಿದೆ ಅಲ್ಲದೇ, ಈ ಹಣದ ಬಗ್ಗೆ ಸಂಪೂರ್ಣ ತನಿಖೆಯಾಗಲೇಬೇಕು ಎಂದು ಕೆಲವು ಸದಸ್ಯರು ಪಟ್ಟು ಹಿಡಿದರು.
ಪುರಸಭೆಗೆ ನಾಮನಿರ್ದೇಶನಗೊಂಡ ಐದು ಸದಸ್ಯರಿಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಅಧ್ಯಕ್ಷ ಶಿವಮ್ಮ ಚಾಕಳ್ಳಿ ಕೃಷ್ಣ, ಉಪಾಧ್ಯಕ್ಷ ಆಸಿಫ್, ಪುರಸಭೆ ಮುಖ್ಯಾಧಿಕಾರಿ ಸುರೇಶ್, ಪುರಸಭಾ ಸದಸ್ಯರಾದ ಗೀತಾ ಗಿರಿಗೌಡ, ದರ್ಶಿನಿ ಯಶ್ವಂತ್, ಸರೋಜಮ್ಮ, ಮೆಕಾನಿಕ್ ಸೂರಿ, ನಾಗಮ್ಮ, ಸುಹಾಸಿನಿ ದಿನೇಶ್, ಕವಿತಾ ಸುರೇಶ್, ಸಾಹಿರಾಬಾನು ಅನ್ಸರ್, ಅನಿತಾನಿಂಗನಾಯಕ, ನರಸಿಂಹಮೂರ್ತಿ, ಐಡಿಯಾ ವೆಂಕಟೇಶ್, ಮಧುಕುಮಾರ್, ರಾಜು ವಿಶ್ವಕರ್ಮ, ಲೋಕೇಶ್, ನಂಜಪ್ಪ, ನಂದಿನಿ ಸೋಮು, ಶಾಂತಮ್ಮ ಮಹೇಂದ್ರ, ಕರಾಟೆ ಪ್ರೇಮ್, ಪುಟ್ಟ ಬಸವ, ಮಿಲ್ಲು ನಾಗರಾಜು, ನಾಮ ನಿರ್ದೇಶನ ಸದಸ್ಯರು ಸ್ಟುಡಿಯೋ ಪ್ರಕಾಶ್, ಅನಿಲ್, ಸೂರ್ಯ ಕುಮಾರ್, ಪಾರ್ಥಸಾರಥಿ, ಹಬೀಬ್, ಹಾಗೂ ಪುರಸಭೆ ಆಡಳಿತ ಅಧಿಕಾರಿಗಳು ಇದ್ದರು.
- ಶಿವು ಕೋಟೆ