ಎಚ್.ಡಿ.ಕೋಟೆ: ನಮ್ಮ ಜಮೀನನ್ನು ಖಾಲಿ ಮಾಡಿ ಎಂದು ನಮಗೆ ಹಿಂಸೆ ನೀಡುತ್ತಿರುವ ಕೆಲವರ ವಿರುದ್ಧ ನಾವು ದೂರು ಕೊಡಲು ಅಂತರಸಂತೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ. ಪೊಲೀಸರು ನಮ್ಮ ದೂರು ಸ್ವೀಕರಿಸದೇ, ಬೇಜಾವಬ್ದಾರಿಯಿಂದ ವರ್ತಿಸುತ್ತಿದ್ದು, ನೊಂದವರ ದೂರು ಸ್ವೀಕರಿಸದ ಪೊಲೀಸರು ಜಮೀನು ಕಬಳಿಸುವವರ ಪರವೋ…? ನೊಂದವರ ಪರವೋ..? ನಮಗೆ ತಿಳಿಯುತ್ತಿಲ್ಲ ಎಂದು ತಾಲೂಕಿನ ಅಂತರಸಂತೆ ಹೋಬಳಿಯ ಹೊನ್ನೂರು ಕುಪ್ಪೆ ಗ್ರಾಮದ ಹುಚ್ಚಬೋವಿ ಕುಟುಂಬಸ್ಥರಾದ ಮಹದೇವ ಬೋವಿ, ದಾಸ ಬೋವಿ, ಮರಿಯಪ್ಪ, ಶಿವಪ್ಪ, ಸಣ್ಣ ಗಂಡು, ಮಹಾದೇವ, ಜವರಮ್ಮ, ತಿರುಮಲಮ್ಮ, ಗೌರಮ್ಮ, ಸಣ್ಣ ತಾಯಮ್ಮ, ಜ್ಯೋತಿ, ಲೋಕೇಶ್, ರಾಜಮ್ಮ ಆರೋಪಿಸಿದ್ದಾರೆ.

ಗ್ರಾಮದ ಪ.ಜಾತಿ ಜನಾಂಗದ ಹುಚ್ಚಬೋವಿ ಎಂಬುವರಿಗೆ ಸರ್ಕಾರದಿಂದ 1973ರಲ್ಲಿ 6 ಎಕರೆ 10 ಗುಂಟೆ ಜಮೀನು ಮಂಜೂರಾಗಿದ್ದು, ತಲೆ ಮಾರುಗಳಿಂದ ಜಮೀನಿನಲ್ಲೇ ವಾಸವಿದ್ದೇವೆ. ತಾಲೂಕಿನಾದ್ಯಂತ ಜಮೀನಿನ ಬೆಲೆ ಹೆಚ್ಚಿರುವುದರಿಂದ ಭೂ ಮಾಫಿಯಾದವರು ಆಸ್ತಿ ಕಬಳಿಸಲು ಕೆಲ ಅಧಿಕಾರಿಗಳೊಂದಿಗೆ ಸೇರಿ ನಕಲಿ ದಾಖಲೆ ಸೃಷ್ಠಿಸಿಕೊಂಡು ನಮಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸ.ನಂಬರ್ 1/1ರಲ್ಲಿ 4.3 ಗುಂಟೆ, 1/2 ರಲ್ಲಿ 29 ಗುಂಟೆ, 1/3 ರಲ್ಲಿ 31 ಗುಂಟೆ, ಸ. 2ರಲ್ಲಿ 35 ಗುಂಟೆ ಜಮೀನು ಮಂಜೂರಾಗಿತ್ತು, ಕಾಲ ನಂತರ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸಂಚು ರೂಪಿಸಿ ನಕಲಿ ದಾಖಲೆ ಸೃಷ್ಠಿಸಿ RTCಯಲ್ಲಿ ಗ್ರಾಮಾಠಾಣಾ ಎಂದು ತಿರುಚಿದ್ದಾರೆ. ಈ ಭಾಗದಲ್ಲಿ ಜಮೀನಿನ ಬೆಲೆ ಗಗನಕ್ಕೇರಿರು ವುದರಿಂದ ಆಸ್ತಿ ಕಬಳಿಸುವ ಹುನ್ನಾರ ಮಾಡಿದ್ದಾರೆ. ಅದಕ್ಕಾಗಿ ಜಮೀನು ನಿಮ್ಮದಲ್ಲ ನೀವು ಇಲ್ಲಿಂದ ಖಾಲಿ ಮಾಡಿ ಎಂದು ಕೆಲವರು ಮಾನಸಿಕ, ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಹುಚ್ಚಬೋವಿ ಕುಟುಂಬದ ವಯೋವೃದ್ಧೆ ಜಯಮ್ಮ ಆರೋಪಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸಿಲ್ದಾರ್ ಅವರನ್ನು ಸಂಪರ್ಕಿಸಿದಾಗ ಅಧಿಕೃತ ದಾಖಲೆಗಳಲ್ಲಿ ಗ್ರಾಮ ಠಾಣಾ ಆಸ್ತಿ ಎಂದು ನಮೂದಾಗಿಲ್ಲ. ಕೇವಲ RTCಯಲ್ಲಷ್ಠೇ ನಮೂದಾಗಿರುವುದರಿಂದ ಈ ಕುರಿತು ಕ್ರಮವಹಿಸುತ್ತೇವೆ ಎಂದು ಅಭಯ ನೀಡಿದ್ದಾರೆ. ಇಷ್ಠಿದ್ದರೂ ಕೆಲ ಕಿಡಿಗೇಡಿಗಳು ರಾಜಕೀಯ ಒತ್ತಡಕ್ಕೆ ಮಣಿದು ನಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
- ಶಿವುಕುಮಾರ, ಕೋಟೆ