ಎಚ್ ಡಿ ಕೋಟೆ-ಭವಿಷ್ಯದಲ್ಲಿ ಅಂಬಾರಿ ಹೊರುವ ಭರವಸೆ ಮೂಡಿಸಿರುವ 41 ವರ್ಷ ಪ್ರಾಯದ ಮಹೇಂದ್ರ ಆನೆಯನ್ನು ದಸರಾ ಬಳಿಕ ಮತ್ತಿಗೋಡು ಆನೆ ಶಿಬಿರದಿಂದ ಎಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರಕ್ಕೆ ಸ್ಥಳಾಂತರ ಮಾಡಲಾಗಿದ್ದು,ತಾಲ್ಲೂಕಿನ ಜನತೆಗೆ ಸಂತಸ ತಂದಿದೆ.
ಬಳ್ಳೆ ಆನೆ ಶಿಬಿರದ ಅರ್ಜುನ ಕಳೆದ ಡಿ.4ರಂದು ಸಕಲೇಶಪುರ ಸಮೀಪ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ದುರಂತ ಅಂತ್ಯ ಕಂಡಿತ್ತು. ಅಲ್ಲದೆ ಬಳ್ಳೆ ಶಿಬಿರದಲ್ಲಿದ್ದ ಕುಮಾರಸ್ವಾಮಿ, ದುರ್ಗಪರಮೇಶ್ವರಿ ಆನೆಗಳೂ ಸಾವನ್ನಪ್ಪಿದ ನಂತರ ಆನೆಗಳಿಲ್ಲದೆ ಬಳ್ಳೆ ಶಿಬಿರ ಖಾಲಿಯಾಗಿತ್ತು. ಇದೀಗ ಅರ್ಜುನನ ಸ್ಥಳಕ್ಕೆ ಮಹೇಂದ್ರ ಆನೆಯನ್ನು ಸ್ಥಳಾಂತರಿಸಲಾಗಿದ್ದು, ಮಹೇಂದ್ರನ ಜತೆ ರಾಮಪುರ ಲಕ್ಷ್ಮೀ ಆನೆಯನ್ನೂ ಕರೆತಂದಿರುವುದು ಬಳ್ಳೆ ಆನೆ ಶಿಬಿರಕ್ಕೆ ಮರುಜೀವ ಬಂದಂತಾಗಿದೆ. ಕ್ಯಾಂಪಿಗೆ ಬಂದ ಆನೆಗಳಿಗೆ ಬಳ್ಳೆಯ ಮಾಸ್ತಮ್ಮ ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸಿ ಸ್ವಾಗತಿಸಿಕೊಳ್ಳಲಾಗಿದೆ.
ಅಂಬಾರಿ ಹೊರುವ ಭರವಸೆ ಮೂಡಿಸಿದ ಮಹೇಂದ್ರ:
ಸದ್ಯ ಮಹೇಂದ್ರ ಭವಿಷ್ಯದ ಅಂಬಾರಿ ಆನೆಯಾಗುವ ಭರವಸೆ ಮೂಡಿಸಿದ್ದಾನೆ. ಈಗಾಗಲೇ ಆನೆ ಪ್ರಿಯರು ಮುಂದಿನ ಅಂಬಾರಿ ಆನೆ ಮಹೇಂದ್ರ ಎಂತಲೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ಮಹೇಂದ್ರನನ್ನು ಬಲಿಷ್ಠವಾಗಿ ತಯಾರುಗೊಳಿಸುವ ಜವಾಬ್ದಾರಿ ಮಾವುತ ರಾಜಣ್ಣ ಮತ್ತು ಕಾವಾಡಿ ಮಲ್ಲಿಕಾರ್ಜುನನ ಮತ್ತು ಜಮೇದಾರನಾಗಿ ನೇಮಕಗೊಂಡಿರುವ ಅರ್ಜುನ ಆನೆಯ ಮಾವುತನಾಗಿದ್ದ ವಿನುವಿನ ಹೆಗಲ ಮೇಲಿದೆ.ಮಹೇಂದ್ರನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಜನರು ಬಳ್ಳೆ ಆನೆ ಶಿಬಿರಕ್ಕೆ ಮಹೇಂದ್ರನಿಗೆ ಸ್ವಾಗತ ಕೊರುತ್ತಿದ್ದಾರೆ.
—————-ಶಿವು ಕೋಟೆ