ಎಚ್.ಡಿ.ಕೋಟೆ-ಮಠಗಳಿಂದ-ನಿಶ್ವಾರ್ಥ-ನಿರಂತರ-ಸೇವೆ-ಸುತ್ತೂರು- ದೇಶೀಕೇಂದ್ರ-ಸ್ವಾಮೀಜಿ-ಹೇಳಿಕೆ

ಎಚ್.ಡಿ.ಕೋಟೆ: ಸಮಾಜದ ಕಲ್ಯಾಣಕ್ಕಾಗಿ ಮಠ, ಮಾನ್ಯಗಳು ನಿರಂತರವಾಗಿ ಸೇವೆಯನ್ನು ಕೈಗೊಂಡಿವೆ. ಶಿಕ್ಷಣ, ವಿವಾಹ, ವಸತಿ ಸೇರಿಂದಂತೆ ಹಲವು ಕಾರ್ಯಗಳನ್ನು‌ ಮಠಗಳು ಮಾಡುತ್ತಿವೆ ಎಂದು ಸುತ್ತೂರು ದೇಶಿಕೇಂದ್ರ ಮಹಾ ಸ್ವಾಮೀಜಿ ತಿಳಿಸಿದರು.

ಬಿಡಗಲು ಪಡವಲು ವಿರಕ್ತಮಠದಲ್ಲಿ ನಡೆದ ಕಾಳ ಒಡೆಯ ಗುರುಗಳ ಆರಾಧನೆ, ದಾಸೋಹ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ‌ ಮಾತನಾಡಿದರು.

ಮಠಗಳು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಜನರ ದುಂದು ವೆಚ್ಚಗಳನ್ನು ತಪ್ಪಿಸಲು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ದಂಪತಿಗಳು ಪರಸ್ಪರ ಅರ್ಥ ಮಾಡಿಕೊಂಡು, ಪರಸ್ಪರ ಮನಸ್ಸುಗಳನ್ನು ಹೊಂದಿಸಿಕೊಂಡು ಬದುಕಬೇಕು. ಇದರಿಂದ ನಿಮ್ಮಗಳ ಕುಟುಂಬಗಳು ಸಂತೋಷದಿಂದ ಇರುತ್ತವೆ ಎಂದು ಹೇಳಿದರು.

ಭಾರತ ಆಧ್ಯಾತ್ಮಿಕ ಶ್ರೀಮಂತಿಕೆಯನ್ನು ಹೊಂದಿದೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಪ್ರಮುಖರು ಮಾನವ ಧರ್ಮದ ಮೂಲವನ್ನು ತಿಳಿಸಿದ್ದಾರೆ. ಯಾರಿಗೂ ತೊಂದರೆ ಕೊಡದೆ, ನೋಯಿಸದೇ ಇರುವುದೇ ಧರ್ಮ. 900 ವರ್ಷಗಳ ಹಿಂದೆ ಪರಸ್ಪರ ಭೇಟಿಗೆ ಜನರು ಎದುರುತ್ತಿದ್ದರು ಅಂತಹ ಸಂದರ್ಭದಲ್ಲಿ ಭಗವಂತನನ್ನು ಎಲ್ಲರೂ ಆರಾಧಿಸಬಹುದು ಎಂದು ಬಸವಾದಿ ಪ್ರಮುಖರು ತಿಳಿಸಿದ ನಂತರ ಎಲ್ಲರೂ ಪರಸ್ಪರ ಬೆರೆಯುವಂತಾಯಿತು ಎಂದು ತಿಳಿಸಿದರು.

ಎಚ್‌.ಡಿ.ಕೋಟೆ ತಾಲೂಕನ್ನು ಆಡಳಿತಾತ್ಮಕ ದೃಷ್ಠಿಯಿಂದ ವಿಭಜಿಸಿದೆಯಾದರೂ ಭಾವನಾತ್ಮಕ ದೃಷ್ಟಿಯಯಲ್ಲಿ ಸರಗೂರು ಹಾಗೂ ಎಚ್.ಡಿ.ಕೋಟೆ ಒಂದೇ ನಾಣ್ಯದ ಎರಡು ಮುಖಗಳು ಎಂದರು.

ತಾಲೂಕಿಗೆ ಧಾರ್ಮಿಕ ಐತಿಹ್ಯ: ತಾಲೂಕು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಮಲೆ ಮಹದೇಶ್ವರ ಸ್ವಾಮಿ ಭೇಟಿ ನೀಡಿದ್ದ ಪುಣ್ಯ ಕ್ಷೇತ್ರವಾಗಿದ್ದು, ಧಾರ್ಮಿಕ ಐತಿಹ್ಯವನ್ನು ಹೊಂದಿದೆ. ಮುಗ್ದತೆ, ಪ್ರೀತಿ, ವಿಶ್ವಾಸಗಳನ್ನು ಅವಳಿ ತಾಲೂಕಿನ ಜನತೆ ಹೊಂದಿದ್ದಾರೆ ಎಂದು ತಿಳಿಸಿದರು.

ಬಿಡಗಲು ಮಠವು ಈ ಭಾಗದ ಜನತೆಗೆ ಹಲವು ರೀತಿಯಲ್ಲಿ ನೆರವಾಗಿದೆ.ಕಾಳ ಒಡೆಯರ ಕಾಲದಿಂದಲೂ‌ ಇಲ್ಲಿಯವರೆಗೆ ಮಠದ ಎಲ್ಲ ಸ್ವಾಮೀಜಿಗಳು ವೈಯಕ್ತಿಕವಾಗಿ ಸಾಧನೆ‌ ಮಾಡಿದ್ದಾರೆ. ಅದರ ಫಲವನ್ನು ಸಾರ್ವಜನಿಕರಿಗೆ ನೀಡಿದ್ದಾರೆ. ಆದ್ದರಿಂದಲೇ ಈ ಮಠಕ್ಕೆ ಜನರು ಶ್ರದ್ಧಾ ಭಕ್ತಿಯಿಂದ ಬರುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಉದ್ಯಮಿ ಯುಎಸ್ ಶೇಖರ್, ಅಪರ ಜಿಲ್ಲಾಧಿಕಾರಿ ಶಿವರಾಜು, ಹಿನಕಲ್ ಬಸವರಾಜು, ಕೆ.ಎಂ.ಕೃಷ್ಣನಾಯಕ, ವೀರಭದ್ರಪ್ಪ, ಪ.ಪಂ ಅದ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಇದ್ದರು.

  • ಶಿವು ಕೋಟೆ

Leave a Reply

Your email address will not be published. Required fields are marked *

× How can I help you?