ಎಚ್.ಡಿ.ಕೋಟೆ, : ಆಧುನಿಕ ನಾಗರೀಕತೆಯ ಯಂತ್ರೋಪಚಾರದ ನಡುವೆ ಸಾಂಪ್ರದಾಯಿಕ ಜಾನಪದ ಸಂಸ್ಕೃತಿ ಮರೆಯಾಗುತ್ತಿದೆ ಎಂದು ರಾಜ್ಯಸಭೆಯ ಮಾಜಿ ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಭಾರತೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2024–25ನೇ ಸಾಲಿನ ಸಮಾರೋಪ ಸಮಾರಂಭ ಮತ್ತು ಜನಪದ ಮಹೋತ್ಸವ ಉದ್ಘಾಟನೆಯಲ್ಲಿ ರಾಗಿ ಹಾಗೂ ಭತ್ತದ ರಾಶಿಗೆ ಪೂಜೆ ಮಾಡಿ, ರಾಗಿಕಲ್ಲು ಬೀಸಿ ನಂತರ ಭತ್ತ ಕುಂಡೋಲಿಸುವ ಮೂಲಕ ಸಂಸ್ಕೃತಿಯ ಪ್ರಾತ್ಯಕ್ಷಿಕೆ ನೀಡಿ, ಮಾತನಾಡಿದ ಅವರು, “ನಗರ ಜೀವನದ ವೇಗದ ನಡುವೆ ಗ್ರಾಮೀಣ ಜನಪದ ಪರಂಪರೆಯ ಜೀವಂತ ಸಂರಕ್ಷಣೆಯೇ ನಮ್ಮ ಹೆಮ್ಮೆ,” ಎಂದರು.

ಕಲಾ, ಆಟ, ಊಟ, ಹಾಡು-ಹಸೆಗಳ ಮೂಲಕ ವಿದ್ಯಾರ್ಥಿಗಳು ಗ್ರಾಮ್ಯ ಸಂಸ್ಕೃತಿಯ ಮರುಸೃಷ್ಟಿ ಮಾಡಿರುವುದರಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ, “ಇಂತಹ ಉತ್ಸವಗಳು ಯುವ ಜನತೆಗೆ ಜಾನಪದ ಪರಂಪರೆಯ ಅರಿವು ಮೂಡಿಸುತ್ತವೆ,” ಎಂದರು. ಕಳೆದ ವರ್ಷದಂತೆ ಈ ಬಾರಿ 4.5 ಕೋಟಿ ರೂ. ಅನುದಾನದಲ್ಲಿ ಮೂಲಸೌಕರ್ಯ ಸುಧಾರಣೆಗೊಂಡಿದ್ದು, ಹೀಗೆ ಮುಂದುವರಿದರೆ ಇನ್ನಷ್ಟು ಅಭಿವೃದ್ಧಿ ಸಾಧ್ಯವೆಂದು ಹೇಳಿದರು.
ಈಗಾಗಲೇ ಹೊಸ ಬಿ.ಸಿ.ಎ. ವಿಭಾಗ ಆರಂಭವಾಗಿರುವುದು ಸಂತಸದ ವಿಚಾರ, ಪ್ರಥಮ ಸಾಲಿನಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲಿಸಿರುವ ಕಾಲೇಜಿಗೆ ಹೆಚ್ಚಿನ ಅನುದಾನ ಘೋಷಣೆ ಬರುತ್ತದೆಂದು ಪ್ರಾಂಶುಪಾಲರು ಭರವಸೆ ವ್ಯಕ್ತಪಡಿಸಿದರು.

“ಸಂಸ್ಕೃತಿಯನ್ನು ಉಳಿಸುವ ಕೆಲಸವೇ ಮುಖ್ಯ” – ಮಲಾರ ಪುಟ್ಟಯ್ಯ
ತಾಲ್ಲೂಕಿನ ಪ್ರಗತಿಪರ ರೈತ ಮಲಾರ ಪುಟ್ಟಯ್ಯರು, “ವಿದ್ಯಾರ್ಥಿಗಳು ಜಾನಪದ ಸಂಸ್ಕೃತಿಯ ಸಾಂಸ್ಕೃತಿಕ ವಿಕಾಸಕ್ಕೆ ಒತ್ತು ನೀಡಬೇಕು. ಕೃಷಿ ಎಂದೂ ಉದ್ಯೋಗದ ಶಕ್ತಿ; ಸ್ವಾವಲಂಬಿ ರೈತರಿಗೆ ಸಾಕ್ಷಿ ನಾನು” ಎಂದರು.
ಅಂತ್ಯದಲ್ಲಿ ಪ್ರಾಂಶುಪಾಲ ಪ್ರೊ. ಅರುಣ್ ಕುಮಾರ್ ಅವರು ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳಿಗಾಗಿ ಅತ್ಯುತ್ಕೃಷ್ಟ ಅಂಕಗಳನ್ನು ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಚೇರಿ ಅಧೀಕ್ಷಕ ಬಾಲಾಜಿ, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟರಾಜು, ಎಸ್.ಜೆ.ಪ್ರೊ. ಬೋರಮ್ಮ ಎಸ್.ಅಂಗಡಿ. ಡಾ. ಮರಿದೇವಯ್ಯ, ಜೀವಿಕ ಬಸವರಾಜು. ಎಚ್.ಸಿ.ಮಂಜುನಾಥ್, ಪುರಸಭಾ ಸದಸ್ಯ ಎಂ.ಮಧು ಕುಮಾರ್, ಚೌಡಳ್ಳಿ ಜವರಯ್ಯ, ಸಿದ್ಧರಾಜು, ವೇಣುಗೋಪಾಲ್, ಮಲ್ಲೇಶ್, ಸಿದ್ದರಾಜು. ಡಾ. ಸೋಮಶೇಖರ್ , ಪ್ರೊ. ಪ್ರಧಾನ ಗುರುದತ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಪ್ರೊ.ರಾಜಶೇಖರ್, ಪ್ರೊ. ಕೃ.ಪ. ಗಣೇಶ ಇದ್ದರು.

ಅನಾವರಣಗೊಂಡ ಹಳ್ಳಿ ಸೊಗಡು: –
ಜಾನಪದ ಕಲಾ ತಂಡಗಳ ಮೆರವಣಿಗೆಯ ಉತ್ಸವದಲ್ಲಿ ಸತ್ತಿಗೆಗಳು ಮತ್ತು ಪಟ ಕುಣಿತ, ಕಂಸಾಳೆ. ಡೊಳ್ಳು ತಮಟೆ ವಾದ್ಯಗಳೊಂದಿಗೆ ಹಳ್ಳಿಕಾರ್ ಎತ್ತಿನ ಬಂಡಿಯಲ್ಲಿ ಶಾಸಕ ಅನಿಲ್ ಚಿಕ್ಕಮಾದು ಕಾಲೇಜಿನ ಆವರಣದ ಸಮಾರಂಭದ ವೇದಿಕೆಗೆ ಆಗಮಿಸಿದರು. ಜಾನಪದ ಹಬ್ಬದ ಅಂಗವಾಗಿ ಕಾಲೇಜಿನ ಆವರಣದಲ್ಲಿ ಅಪ್ಪಟ ಹಳ್ಳಿಯ ಪರಿಸರವನ್ನು ವಿದ್ಯಾರ್ಥಿಗಳು ನಿರ್ಮಿಸಿದ್ದರು. ಹಳ್ಳಿಯ ಅಡುಗೆ ಒಲೆ, ನೀರು ಸೇದುವ ಬಾವಿಕಟ್ಟೆ. ಮರಕ್ಕೆ ಕಟ್ಟಿದ ಉಯ್ಯಾಲೆ, ಪಗಡೆ, ಬುಗುರಿ, ಕುಂಟೇ ಬಿಲ್ಲೆ ಆಟ, ಕಬ್ಬಡ್ಡಿ, ಆಣೆಕಲ್ಲು, ಗೋಲಿಯಾಟ ಹೀಗೆ ಹಳ್ಳಿಯ ಜನಪದ ಆಟಗಳನ್ನು ಕಾಲೇಜಿನ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮರುಸೃಷ್ಟಿಸಿದ್ದರು. ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಾಳೆ ಎಲೆಯ ಜಾನಪದ ಊಟವನ್ನು ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿದರು.
- ಶ್ರೀನಿವಾಸ್ ಆರ್.