ಎಚ್.ಡಿ.ಕೋಟೆ: ವಿದ್ಯಾರ್ಥಿ ಜೀವನದ ಬಹುಮುಖ್ಯ ಘಟ್ಟ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಈ ಬಾರಿಯ ಫಲಿತಾಂಶದಲ್ಲಿ ಸುಧಾರಣೆ ತಂದು ಗಮನಾರ್ಹ ಸಾಧನೆ ಮಾಡಲು ಶಿಕ್ಷಣ ಇಲಾಖೆಯ ತಾಲೂಕಿನ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.
ಕಳೆದ ಬಾರಿಯ ಫಲಿತಾಂಶದಲ್ಲಿ ಜಿಲ್ಲೆಗೆ ಕೊನೆಯ ಒಂಬತ್ತನೇ ಸ್ಥಾನ ಪಡೆದುಕೊಂಡಿದ್ದ ಎಚ್.ಡಿ.ಕೋಟೆ ತಾಲೂಕು ಇಲ್ಲಿನ ಜನರಿಂದ ಟೀಕೆಗೆ ಗುರಿಯಾಗಿತ್ತು. ಈ ಸಂಬಂಧ ತಾಲೂಕಿನ ತ್ರೈಮಾಸಿಕ ಸಭೆಯಲ್ಲಿಯೇ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ಅವರು ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಅವರನ್ನು ತೀವ್ರ ತರಾಟಗೆ ತಗೆದುಕೊಂಡು, ಈ ಬಾರಿಯ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ತಾಲೂಕು ಉತ್ತಮ ಸ್ಥಾನ ಬರಬೇಕು ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿ ಇಲ್ಲವೇ ಕ್ಷೇತ್ರದಿಂದ ವರ್ಗಾವಣೆಯಾಗಿ ಎಂದು ಬಹಿರಂಗವಾಗಿಯೇ ತಾಕೀತು ಮಾಡಿದ್ದರು.
ನಂತರದಲ್ಲಿ ಶಿಕ್ಷಣಾಧಿಕಾರಿ ತಾಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷರಿಗೆ ಹಲವು ಸಭೆಗಳನ್ನು ನಡೆಸಿ ಹತ್ತು, ಹಲವು ಕಾರ್ಯಕ್ರಮಗ ಳೊಂದಿಗೆ ಹೆಜ್ಜೆ ಇಟ್ಟಿರುವ ಶಿಕ್ಷಣ ಇಲಾಖೆ ಹತ್ತನೆ ತರಗತಿಯ ವಿದ್ಯಾರ್ಥಿಗಳಿಗೆ ಆಗ್ಗಿಂದಾಗೆ ಪರೀಕ್ಷೆ ನಡೆಸುವುದು, ವಿಷಯಾವಾರು ಕಲಿಕೆಗೆ ಆದ್ಯತೆ, ವಿಶೇಷ ತರಗತಿಗಳು, ವಿದ್ಯಾರ್ಥಿಗಳ ಸಂಯೋಜನೆ ಸೇರಿದಂತೆ ಹಲವು ಪ್ರಯೋಗಗಳನ್ನು ಮಾಡಿದೆ.
ತಾಲೂಕಿನ 31 ಸರ್ಕಾರಿ, ಅನುದಾನ ರಹಿತ, ಅನುದಾನ ಸಹಿತ ಪ್ರೌಢಶಾಲೆಗಳ ಒಟ್ಟು 60 ಪ್ರೌಢಶಾಲೆಗಳ 1754 ಬಾಲಕರು, 1770 ಬಾಲಕಿಯರು ಸೇರಿದಂತೆ ಒಟ್ಟು 3524 ವಿದ್ಯಾರ್ಥಿಗಳು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

ವೆಬ್ ಕಾಸ್ಟಿಂಗ್ ವ್ಯವಸ್ಥೆ :-
ಶಿಕ್ಷಣ ಇಲಾಖೆ ನೂತನವಾಗಿ ವೆಬ್ ಕಾಸ್ಟಿಂಗ್ ಪ್ರಯೋಗಕ್ಕೆ ಮುಂದಾಗಿದ್ದು, ಪರೀಕ್ಷಾ ಕೊಠಡಿಗಳ ಒಳಗೆ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಯಲಿದೆ. ಇದರಲ್ಲಿ ಯಾವುದೇ ಲೋಪದೋಷ ಉಂಟಾಗದಿರಲು ತಂತ್ರಜ್ಞರ ನೆರವು ತೆಗೆದುಕೊಳ್ಳಲಾಗಿದೆ. ಇನ್ನು, ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ಅಂತರವನ್ನು ನಿಷೇಧಿತ ಪ್ರದೇಶವೆಂದು ಗುರುತು ಮಾಡಿ ಪೊಲೀಸ್ ಕಣ್ಗಾವಲಿಟ್ಟಿದೆ.
ಪರೀಕ್ಷೆಗೆ ಸಿದ್ದತೆ ಕೈಗೊಂಡಿರುವ ತಾಲೂಕು ಆಡಳಿತ :-
ಮಾ.21ರಿಂದ ಏ.4 ರವರೆಗೆ ನಡೆಯುವ ಹತ್ತನೆ ತರಗತಿ ವಾರ್ಷಿಕ ಪರೀಕ್ಷೆಗೆ ಸಂಬಂದಿಸಿದಂತೆ ನಡೆದಿರುವ ಪೂರ್ವ ಸಿದ್ದತೆಗಳ ಬಗ್ಗೆ ಕಳೆದ ವಾರ ಸಭೆ ನಡೆಸಿದ ತಹಸೀಲ್ದಾರ್ ಶ್ರೀನಿವಾಸ್, ಪರೀಕ್ಷೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ಪರೀಕ್ಷೆಯಯ ವ್ಯವಸ್ಥಿತವಾಗಿ ನಡೆಸಬೇಕು. ತಾಲೂಕಿನ ದೂರದೂರುಗಳಿಂದ ಪರೀಕ್ಷಾ ಕೇಂದ್ರಕ್ಕೆ ಬರುವ ಪರೀಕ್ಷಾರ್ಥಿ ಗಳಿಗೆ ಬಸ್ ಸೌಲಭ್ಯದಲ್ಲಿ ಲೋಪವಾಗಬಾರದು ಎಂದು ಕೆ ಎಸ್ ಆರ್ ಟಿ ಸಿ ಘಟಕ ವ್ಯವಸ್ಥಾಪಕರಿಗೆ ತಿಳಿಸಿರುವ ಅವರು, ಪರೀಕ್ಷಾ ಅವಧಿಯಲ್ಲಿ ವಿದ್ಯುತ್ ನಿಲುಗಡೆಯಾಗಬಾರದು. ಒಂದು ವೇಳೆ ಅಡಚಣೆ ಉಂಟಾದರೆ ಅದನ್ನು ತಪ್ಪಿಸಲು ಪರೀಕ್ಷಾ ಕೇಂದ್ರದಲ್ಲಿ ಯುಪಿಎಸ್ ವ್ಯವಸ್ಥೆ ಮಾಡಿರಬೇಕು. ಪರೀಕ್ಷಾ ಕೇಂದ್ರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಾ.ಪಂ ಇಒ ಅವರಿಗೆ ಸೂಚಿಸಿದರು. ಪೊಲೀಸ್ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿರುವಂತೆ ತಿಳಿಸಿದ್ದಾರೆ.
ಪ್ರೇರಣಾ ಕಾರ್ಯಗಾರ :-
ಪರೀಕ್ಷೆ ಫಲಿತಾಂಶ ಸುಧಾರಣೆಗೆ ವಿದ್ಯಾರ್ಥಿಗಳ ಭಯ ನಿವಾರಣೆಗೆ ಹೋಬಳಿವಾರು ಪ್ರೇರಣಾ ಕಾರ್ಯಗಾರ ಮಾಡಲಾಗಿದೆ. ಬೋರ್ಡ್ ನಿಂದ ಬರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವವರಿಗೆ ಪಾಸಿಂಗ್ ಪ್ಯಾಕೇಜ್, ಸ್ಕೋರಿಂಗ್ ಪ್ಯಾಕೇಜ್ ನೀಡಲಾಗಿದೆ. ವಿಷಯವಾರು ಶಿಕ್ಷಕರ ಕಾರ್ಯಾಗಾರ ಮಾಡಲಾಗಿದೆ. ಶಿಕ್ಷಕರು ಸಹ ಫಲಿತಾಂಶ ಸುಧಾರಣೆಗೆ ಮುಂದಾಗಿದ್ದಾರೆ.
– ಶಿವಕುಮಾರ ಕೋಟೆ