ಎಚ್.ಡಿ.ಕೋಟೆ : ಪಟ್ಟಣದ ಒಂದನೇ ಮುಖ್ಯರಸ್ತೆಯಲ್ಲಿರುವ ಲಕ್ಷ್ಮೀವರದರಾಜಸ್ವಾಮಿ ದೇವಸ್ಥಾನವು ಹಲವು ಇತಿಹಾಸವನ್ನು ಹೇಳುವ ಪುರಾತನ ಪ್ರಸಿದ್ಧ ದೇಗುಲ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಲಕ್ಷ್ಮೀ ವರದರಾಜಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಲಕ್ಷ್ಮೀದೇವಿ ಅಮ್ಮನವರ ದೇವಸ್ಥಾನ ಪುನರ್ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ಥಳೀಯರು ನಿರ್ವಹಣೆ ಮಾಡಿ ಕಾಲಕಾಲಕ್ಕೆ ಜೀರ್ಣೋದ್ಧಾರ ಮಾಡಿ, ಕೋಟ್ಯಾಂತರ ವೆಚ್ಚವನ್ನು ಭಕ್ತಾದಿಗಳೆ ಭರಿಸಿದ್ದು, ದೈಗುಲಕ್ಕೆ ರಾಜಗೋಪುರ ನಿರ್ಮಾಣ ಮಾಡಿರುವುದರಿಂದ ಪಟ್ಟಣದ ಜನತೆಗೆ ಶೋಭೆ ತಂದಿದೆ, ಸರ್ಕಾರದಿಂದ ಅತ್ಯಲ್ಪ ಪ್ರಮಾಣದಲ್ಲಿ ನೆರವು ಸಿಕ್ಕಿದೆ.
ಇತಿಹಾಸವನ್ನು ಹೇಳುವ ಈ ದೇಗುಲವು ಸ್ಮಾರಕವಿದ್ದಂತೆ, ಇಂತಹ ದೇಗುಲಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮಲ್ಲರ ಮೇಲಿದೆ. ರಥವನ್ನು ನಿಲ್ಲಿಸಿಕೊಳ್ಳಲು ಸ್ಥಳಾವಕಾಶ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳತ್ತೇನೆ, ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಕ್ರಮ ಕೈಗೊಳ್ಳಲಾಗುವುದು ಎಂದರು.
ದೇವಸ್ಥಾನದ ಧರ್ಮದರ್ಶಿ ತಿರುಮಲಾಚಾರ್ ಮಾತನಾಡಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಜಾಗದಲ್ಲಿದ್ದ ರಥದ ಶೆಡ್ಡನ್ನು ತಹಶೀಲ್ದಾರ್ ಶ್ರೀನಿವಾಸ ಮತ್ತು ಪುರಸಭೆಯ ಮುಖ್ಯಾಧಿಕಾರಿ ಸುರೇಶ್ ಏಕಾ ಏಕಿ ಕಿತ್ತುಹಾಕಿದ್ದಾರೆ. ಸರ್ಕಾರದ ಸ್ವಾದೀನದಲ್ಲಿರುವ ಶೆಡ್ಡನ್ನು ತೆರವು ಮಾಡಲು ಇವರಿಗೆ ಯಾರು ಕುಮ್ಮಕ್ತು ನೀಡಿದ್ದಾರೆ ಎಂದರು.

ತಹಶೀಲ್ದಾರ್ ಶ್ರೀನಿವಾಸ ಮಾತನಾಡಿ, ದೇವಸ್ಥಾನದ ಮುಂಭಾಗದ ಸ್ಥಳ ಸರ್ಕಾರಿ ಸ್ವತ್ತಾಗಿದ್ದು, ಇಲ್ಲಿ ರಥ ನಿಲ್ಲಿಸಿರುವ ಸ್ಥಳದಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಇದೆ ಎಂದು ಸ್ಥಳೀಯರು ಲೋಕಾಯುಕ್ತ ಇಲಾಖೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಥ ನಿಲ್ಲಿಸಲು ಬದಲಿ ಸ್ಥಳಕ್ಕೆ ವ್ಯವಸ್ಥೆ ಕಲ್ಪಿಸಿ ಇಲ್ಲಿಂದ ಬೇರೆಡೆ ಸ್ಥಳಾಂತರಿಸಲು ಪುರಸಭೆ ಇಲಾಖೆ ತಿಳಿಸಲಾಗಿದೆ. ಸದ್ಯದಲ್ಲಿಯೇ ಕ್ರಮವಹಿಸಲಾಗುವುದು. ಮುಖ್ಯಮಂತ್ರಿಗಳ ಚಿನ್ನದ ಪದಕ ಪಡೆದ ಪೊಲೀಸ್ ಗುಪ್ತಚರ ಇಲಾಖೆಯ ರಮೇಶ್ ರಾವ್, ಪಟ್ಟಣದ ಪೊಲೀಸ್ ಸೈಯ್ಯದ್ ಕಬೀರ್ ಹುಸೇನ್ ಇವರುಗಳಿಗೆ ಅಭಿನಂದಿಸಲಾಯಿತು.
ಈ ವೇಳೆ ಬಿ.ಎಸ್, ವೆಂಕಟೇಶ್ ಪ್ರಸಾದ್, ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಎಂ.ಸಿ.ದೊಡ್ಡನಾಯಕ, ತಿರುಮಲಾಚಾರ್, ಎಸ್.ಕೆ.ಡಿ.ಆರ್.ಡಿ.ಪಿ ಜಿಲ್ಲಾ ನಿರ್ದೇಶಕ ವಿಜಯ ಕುಮಾರ್ ನಾಗನಾಳ, ಆದಿ ಕರ್ನಾಟಕ ಮಹಾ ಸಭಾದ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ, ಕಾಂಗ್ರೆಸ್ ಮುಖಂಡ ಎಚ್.ಸಿ.ಮಂಜುನಾಥ್, ಮೈಮುಲ್ ನಿರ್ದೇಶಕ ಕೆ.ಈರೇಗೌಡ, ಸಿ.ಎನ್.ನಾಗಣ್ಣ, ಶ್ರೀಕಾಂತ್, ಪರಶಿವಮೂರ್ತಿ, ಕನ್ನಡ ಪ್ರಮೋದ ಇದ್ದರು.
– ಶಿವಕುಮಾರ