ಹೆಚ್ ಡಿ ಕೋಟೆ/ಸರಗೂರು-ಸಿ. ಎಂ ಭೇಟಿ ಕಾರಣಕ್ಕೆ ರಸ್ತೆ ಗುಂಡಿ ಮುಚ್ಚುತ್ತಿರುವ ತಾಲೂಕು ಆಡಳಿತ-ಸಾರ್ವಜನಿಕರು ಪ್ರಾಣಿಗಳೇ ಎಂದು ಪ್ರಶ್ನಿಸಿದ ಕುರುಬೂರು ಶಾಂತಕುಮಾರ್

ಸರಗೂರು: ಮುಖ್ಯಮಂತ್ರಿ ಬರುವ ರಸ್ತೆ ಮಾತ್ರ ಅಧಿಕಾರಿಗಳ ಕಣ್ಣಿಗೆ ಕಾಣುತ್ತದೆ. ಬಿದರಹಳ್ಳಿ ಮೂರ್ಬಾಂದು ಮಾರ್ಗ ಭೀಮನ ಕೊಲ್ಲಿ, ಎನ್.ಬೇಗೂರು ಗ್ರಾಮಗಳ ರೈತರು ತಿರುಗಾಡುವ ರಸ್ತೆ ಸರ್ಕಾರಕ್ಕೆ ಕಾಣುತ್ತಿಲ್ಲವೇ ಎಂದು ರೈತ ಸಂಘಟನೆಗಳ ಒಕ್ಕೂಟ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಮಾರ್ಗ ಪ್ರಾಣಿಗಳು ಕೂಡ ತಿರುಗಾಡಲು ಯೋಗ್ಯವಲ್ಲದ ರಸ್ತೆಯಾಗಿದೆ. ಮುಖ್ಯಮಂತ್ರಿಗಳ ಓಲೈಕೆಗಾಗಿ ಮೈಸೂರು-ಎಚ್.ಡಿ ಕೋಟೆ ಮಾರ್ಗದ ರಸ್ತೆ ಗುಂಡಿ ಮುಚ್ಚುವ ಕಾರ್ಯ ತರಾತುರಿಯಲ್ಲಿ ನಡೆದಿದೆ.

ಕ್ಷೇತ್ರದ ಶಾಸಕರಿಗೆ ಬಿದರಹಳ್ಳಿ ರಸ್ತೆ ಕಾಣುತ್ತಿಲ್ಲವೇ. ಎಂದು ರೈತರು ಜಾನುವಾರುಗಳೊಂದಿಗೆ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಭೀಮನ ಕೊಲ್ಲಿ ಶುಂಠಿ ಬೆಳೆಗಾರರ ಸಭೆಗೆ ಹೋಗುತ್ತಿದ್ದ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಸ್ತೆಯ ಅವ್ಯವಸ್ಥೆಯನ್ನು ನೋಡಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿಗಳು ಬರುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿಗಳ ಹಳ್ಳಕೊಳ್ಳಮುಚ್ಚುತ್ತಾರೆ. ಇದೇ ಕ್ಷೇತ್ರದ ಕಾಡಂಚಿನ ಭಾಗದಲ್ಲಿರುವ ರೈತರು ಜಾನುವಾರುಗಳು ತಿರುಗಾಡುವ ರಸ್ತೆ ಅವ್ಯವಸ್ಥೆಯಾಗಿದೆ. ಇದು ಶಾಸಕರಿಗೆ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಎಂದು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದ ಜನರು ಪ್ರಾಣಿಗಳೇ? ಯಾಕೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಕೂಡಲೇ ರಸ್ತೆ ಸರಿಪಡಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಜಿಲ್ಲೆಯ ಮುಖ್ಯ ಕೇಂದ್ರದಲ್ಲಿ ಸಂಬಂಧಪಟ್ಟ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿ, ಬೇಕೇ ಬೇಕು ನ್ಯಾಯ ಬೇಕು. ಕಾಡಂಚಿನ ಹಳ್ಳಿಗಳ ರಸ್ತೆ ರಿಪೇರಿ ಆಗಲೇಬೇಕು. ಎಂದು ಘೋಷಣೆ ಕೂಗಿ ಸ್ವಲ್ಪ ಕಾಲ ಪ್ರತಿಭಟನೆ ನಡೆಸಿದರು.

ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಗುಂಡ್ಲುಪೇಟೆ ನಾಗಾರ್ಜುನ, ಪಿ ಸೋಮಶೇಖರ್, ಸುರೇಶ್ ಶೆಟ್ಟಿ, ಮರಿಸ್ವಾಮಿ ನಾಯಕ, ಸುನಿಲ್ ಕುಮಾರ್, ಕೆಂಡಗಣ್ಣಸ್ವಾಮಿ, ಪರಶಿವಮೂರ್ತಿ, ಅಂಬಳೆ ಮಂಜುನಾಥ್, ಮಲ್ಲೇಶ್, ರಂಗರಾಜು, ಬನ್ನೂರು ಸೂರಿ, ಶಿವಸ್ವಾಮಿ ಸೇರಿದಂತೆ ಮತ್ತಿತರರಿದ್ದರು.

_—–ವರದಿ: ಶಿವು ಕೋಟೆ.

Leave a Reply

Your email address will not be published. Required fields are marked *

× How can I help you?