ಎಚ್.ಡಿ.ಕೋಟೆ:ನಾಡಿನ ಸಂಸ್ಕೃತಿ, ಕಲೆ,ಪರಂಪರೆಯನ್ನು ಬಿಂಬಿಸುವ ವಿಶ್ವ ವಿಖ್ಯಾತ ಮೈಸೂರು ದಸರಾ ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆಯುತ್ತದೆ.ಮೈಸೂರು ದಸರಾದ ಆಚರಣೆ ಹಾಗೂ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಪಟ್ಟಣದ ಶ್ರೀ ಸಿದ್ದಪ್ಪಾಜಿ ರಸ್ತೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿನೂತನ ಕಾರ್ಯಕ್ರಮವನ್ನು ಶಾಲಾ ಶಿಕ್ಷಕರು ಆಯೋಜಿಸಿದ್ದರು.
ದಸರಾ ಹಬ್ಬದ ಆಚರಣೆಯ ಗತವೈಭವ, ಹಿನ್ನೆಲೆ,ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳನ್ನು ಮಕ್ಕಳಿಗೆ ಪರಿಚಯಿಸಲು ಶಾಲೆಯಲ್ಲಿ ಅರಮನೆಯ ಜೊತೆಗೆ ಇನ್ನಿತರೆ ಮಾದರಿಗಳನ್ನು ಸೃಷ್ಟಿಸಲಾಗಿತ್ತು.
ನವರಾತ್ರಿಯ ದಿನಗಳಲ್ಲಿ ಮೈಸೂರಿನಲ್ಲಿ ನಡೆಯುವ ಸಾಂಪ್ರದಾಯಿಕ, ಧಾರ್ಮಿಕ ಹಿನ್ನೆಲೆಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕಿಯರು ಪರಿಚಯಿಸಿದರು.
ಥರ್ಮೋಕೋಲ್ ನಿಂದ ಮೈಸೂರು ಅರಮನೆಯ ಮಾದರಿಯನ್ನು ವಿದ್ಯಾರ್ಥಿಗಳಿಂದ ತಯಾರಿಸಲಾಗಿತ್ತು. ಇದರ ಜೊತೆಗೆ ಅರಮನೆ ಹಾಗೂ ಮಹಾರಾಜರಿಗೆ ಸಂಬಂಧಿಸಿದ ಪಟ್ಟದ ಆನೆ, ಪಟ್ಟದ ಕುದುರೆ, ರಾಜ ಮನೆತನದವರ ಕಾರುಗಳು, ರಾಜರ ಆಡಳಿತ, ಮೆರವಣಿಗೆಯಲ್ಲಿ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಆನೆ ಸೇರಿದಂತೆ ನವರಾತ್ರಿಯ ವಿಶೇಷ ಆಚರಣೆ ಜತೆಗೆ, ಇನ್ನಿತರೆ ಆಚರಣೆಗಳು ಮಕ್ಕಳಿಗೆ ಮನಮುಟ್ಟುವಂತೆ ಶಿಕ್ಷಕಿಯರು ಪರಿಚಯಿಸಿದರು.
ಶಿಕ್ಷಕಿ ಅಜರಫ್ ಫಾತೀಮಾ ಸೇರಿದಂತೆ ಸಿಬ್ಬಂದಿಗಳು ಸೇರಿದಂತೆ ಪೋಷಕರು ಭಾಗವಹಿಸಿದ್ದರು.
ಇದೇ ಪ್ರಥಮ ಬಾರಿಗೆ ನಮ್ಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಶಾಲಾ ದಸರಾ ಕಾರ್ಯಕ್ರಮ ನಡೆಸಲಾಯಿತು.ಚಿಕ್ಕ ವಯಸ್ಸಿನ ಮಕ್ಕಳಾದ್ದರಿಂದ ದಸರಾಗೆ ಕರೆದುಕೊಂಡು ಹೋಗಿ ಬರಲು ಕಷ್ಟಸಾಧ್ಯವಾದ್ದರಿಂದ ದಸರಾ ಹಬ್ಬವನ್ನು ಪರಿಚಯಿಸಲು ಶಾಲೆಯಲ್ಲಿಯೇ ಕಾರ್ಯಕ್ರಮ ಮಾಡಲಾಯಿತು.ವಿದ್ಯಾರ್ಥಿಗಳು ಬಹಳ ಸಂತೋಷದಿಂದಲೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
- ರೇಖಾ, ಮುಖ್ಯಶಿಕ್ಷಕಿ
—————————–-ಶಿವು ಕೋಟೆ