ಎಚ್.ಡಿ. ಕೋಟೆ-ಕೇರಳ ಮೂಲದ ಶುಂಠಿ ಕಂಪನಿಗಳು ಶುಂಠಿ ಕಟಾವು ಮಾಡಲು ಕಡಿಮೆ ಹಣ ನೀಡುತ್ತಿದ್ದಾರೆ ಎಂದು ಆರೋಪಿಸಿ ಎಚ್.ಡಿ. ಕೋಟೆ, ಸರಗೂರು, ಹುಣಸೂರು ಮತ್ತು ಪಿರಿಯಾಪಟ್ಟಣದ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಸದಸ್ಯರು ಶುಂಠಿ ಕಟಾವನ್ನು ಬಹಿಷ್ಕರಿಸಿ ತಮ್ಮ ಸಂಘದ ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಿದರು.
ಮೈಸೂರು ಮಾನಂದವಾಡಿ ಹೆದ್ದಾರಿಗೆ ಹೊಂದಿಕೊಂಡಂತಿರುವ ಬೊಪ್ಪನಹಳ್ಳಿ ಸಮೀಪವಿರುವ ಶ್ರಮಜೀವಿ ಶುಂಠಿ ಕೂಲಿ ಕಾರ್ಮಿಕರ ಸಂಘದ ಕಚೇರಿ ಮುಂಭಾಗ ನೂರಾರು ವಾಹನಗಳಲ್ಲಿ ಸಾವಿರಾರು ಮಂದಿ ಕೂಲಿ ಕಾರ್ಮಿಕರು ಜಮಾಯಿಸಿ ಶುಂಠಿ ಕಟಾವು ಮಾಡುವುದಿಲ್ಲ ಎಂದು ಕಟಾವು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಅಧ್ಯಕ್ಷ ಮಗ್ಗೆ ಸುಂದ್ರ ಮಾತನಾಡಿ, ಕೇರಳ ಮೂಲದ ಶುಂಠಿ ಕೊಳ್ಳುವ ಕಂಪನಿಗಳು,ನಮ್ಮ ರಾಜ್ಯಕ್ಕೆ ಬಂದು ನಮ್ಮ ಸಂಘದಲ್ಲಿನ 5000 ಕ್ಕೂ ಹೆಚ್ಚಿನ ಕೂಲಿ ಕಾರ್ಮಿಕರನ್ನು ಬಳಸಿಕೊಂಡು ಶುಂಠಿ ಕಟಾವು ಮಾಡಿ 60 ಕೆಜಿ ತೂಕದ ಒಂದು ಚೀಲಕ್ಕೆ ಈ ಹಿಂದೆ 275 ರೂ ನೀಡುತ್ತಿದ್ದರು. ಆದರೆ ಕ್ರಮೇಣ ಕಟಾವು ಹಣವನ್ನು ಕಡಿಮೆ ಮಾಡುತ್ತಾ ಬಂದಿದ್ದು ಒಂದು ಚೀಲಕ್ಕೆ ಈಗ 175 ರೂಗಳನ್ನು ಕೊಡತೊಡಗಿದ್ದರು.
ನಮ್ಮ ಸಂಘದ ಕೂಲಿ ಕಾರ್ಮಿಕರು ವಿಧಿ ಇಲ್ಲದೇ ಜೀವನ ನಿರ್ವಹಣೆಗಾಗಿ ಅವರು ನೀಡಿದ ಬೆಲೆಗೆ ಶುಂಠಿ ಕಟಾವು ಮಾಡುತ್ತಿದ್ದರು.ಸದ್ಯ ಕೂಲಿಯನ್ನು 175 ರಿಂದ 150 ರೂಗಳಿಗೆ ಇಳಿಸಿರುವುದರಿಂದ ನಮ್ಮ ಕಾರ್ಮಿಕರು ಶುಂಠಿ ಕಟಾವಿಗೆ ತೆರಳದೇ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.
ಕೇರಳ ಮೂಲದ ಶುಂಠಿ ಕೊಳ್ಳುವ ಕಂಪನಿಗಳಿಗೆ ಬಿಸಿ ಮುಟ್ಟಿಸುವವರೆಗೂ ನಾವು ಕಟಾವು ಮಾಡಲು ಜಮೀನುಗಳಿಗೆ ತೆರಳುವುದಿಲ್ಲ.ಶಾಸಕ ಅನಿಲ್ ಚಿಕ್ಕಮಾದುರವರು ಮಧ್ಯ ಪ್ರವೇಶಿಸಿ ತಾಲ್ಲೂಕಿನ ಶುಂಠಿ ಕಾರ್ಮಿಕರಿಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಕಾರ್ಮಿಕರುಗಳು ಒಕ್ಕೊರಲಿನಿಂದ ಆಗ್ರಹಿಸಿದರು.
—————––ಶಿವು ಕೋಟೆ