ಎಚ್.ಡಿ.ಕೋಟೆ: ಬೆಲೆ ಏರಿಕೆ, ದಲಿತರ ಹಣ ಲೂಟಿ, ಮುಸ್ಲೀಂ ಓಲೈಕೆ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಕರೆ ಕೊಟ್ಟಿರುವ ಜನಾಕ್ರೋಶ ಯಾತ್ರೆಗೆ ಮೈಸೂರಿನಿಂದ ಚಾಲನೆ ಕೊಡುವ ಸಂದರ್ಭದಲ್ಲಿ ಮುಖಂಡ, ಸಮಾಜ ಸೇವಕ ಕೆ.ಎಂ.ಕೃಷ್ಣನಾಯಕ ನೇತ್ರತ್ವದಲ್ಲಿ ತಾಲೂಕಿನ ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಹೆಚ್.ಡಿ.ಕೋಟೆ ಹಾಗೂ ಸರಗೂರಿನ ತಾಲೂಕಿನ ಕಾರ್ಯಕರ್ತರು ಸಮಾವೇಶಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಕಳೆದ ಸಾಲಿನ ಪರಾಜಿತ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಮಾತನಾಡಿ, ಗ್ಯಾರಂಟಿಗಳನ್ನು ಘೋಷಿಸಿ ಜನರಿಗೆ ಆಸೆ ಹುಟ್ಟಿಸಿ ಮೋಸದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ಗ್ಯಾರಂಟಿಗಳಿಗೆ ಹಣ ಸರಿಹೊಂದಿಸಲು ಅಗತ್ಯ ವಸ್ತುಗಳ ಬೆಲೆ ಏರಿಸಿದೆ ಎಂದು ಕಿಡಿಕಾರಿದರು.
ರಾಜ್ಯದ ಯಾವೊಬ್ಬ ಜನತೆಯು ಕೂಡ ಗ್ಯಾರಂಟಿಗಳಿಗೆ ಬೇಡಿಕೆ ಇಟ್ಟಿರಲಿಲ್ಲ. ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಅವೈಜ್ಞಾನಿಕವಾಗಿ ಐದು ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ಈಡೇರಿಸಲಾಗದೆ ಬೆಲೆ ಏರಿಕೆ ಮಾಡಿ ಖಜಾನೆ ತುಂಬಿಸಿಕೊಂಡು ಬಡ ಜನರ ಹೊಟ್ಟೆ ಮೇಲೆ ಹೊಡೆದು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಶಕ್ತಿಯೋಜನೆ ಎಂದು ಬಸ್ ನಲ್ಲಿ ಉಚಿತ ಪ್ರಯಾಣವನ್ನು ಮಹಿಳೆಯರಿಗೆ ನೀಡಿದ್ದಾರೆ. ಆದರೆ, ನಿಗದಿತ ಸಮಯಕ್ಕೆ ಬಸ್ ಗಳೇ ಬರುತ್ತಿಲ್ಲ. ಬಸ್ ಪ್ರಯಾಣ ದರವನ್ನು ಏರಿಸಿದ್ದಾರೆ. ವಿದ್ಯುತ್ ದರ ಏರಿಕೆ, ಗೃಹಲಕ್ಷ್ಮೀ ಹಣ ಫಲಾನುಭವಿಗಳಿಗೆ ನಿಗದಿತವಾಗಿ ಜಮಾ ಆಗುತ್ತಿಲ್ಲ.ಅನ್ನಭಾಗ್ಯ ಯೋಜನೆಯಲ್ಲೂ ಗೊಂದಲ. ಯುವ ನಿಧಿ ಗ್ಯಾರಂಟಿ ನೆಲಕಚ್ಚಿದೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಶಂಭೇಗೌಡ, ಗುರುಸ್ವಾಮಿ, ಮೊತ್ತ ಬಸವರಾಜಪ್ಪ, ವೆಂಕಟಸ್ವಾಮಿ, ಬಿಡುಗಲು ರಾಜು, ಮಾದಾಪುರ ಗಿರೀಶ್, ವಕೀಲರಾದ ಪ್ರಶಾಂತ್, ಪ್ರಸನ್ನ, ಲೇಖನ, ಪ್ರದೀಪ್, ಶ್ರೀನಾಥ್, ನಂಜನಾಯಕನಹಳ್ಳಿ ಗುರುಸ್ವಾಮಿ, ಕೆಎಂ ಮಹೇಶ್, ಗೋಪಾಲಯ್ಯ, ಜವರಯ್ಯ, ರಾಜೇಶ್, ಹಾಗೂ ಇನ್ನು ಅನೇಕ ಮುಖಂಡರು ಹಾಗೂ ಸಾವಿರಕ್ಕೂ ಹೆಚ್ಚಿನ ಕಾಯಕರ್ತರು ಇದ್ದರು.
ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ, ಹಾಲಿನ ದರ ಏರಿಕೆ, ಬಸ್ ಪ್ರಯಾಣ ದರ ಏರಿಕೆ, ಆರ್ ಟಿ ಸಿ, ಸ್ಟಾಂಪ್ ಪೇಪರ್ ದರ, ಆಸ್ಪತ್ರೆಯ ಸೇವಾ ಶುಲ್ಕಗಳ ಹೆಚ್ಚಳ, ಡಿಸೇಲ್, ಪೆಟ್ರೋಲ್ ದರಗಳ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏಕಾ-ಏಕಿ ಏರಿಸಿ ಬಡವರಿಗೆ ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬೆಲೆ ಏರಿಕೆ ಪ್ರಮಾಣ ಕಡಿಮೆ ಎಂದು ಸಮರ್ಥಿಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ನಮ್ಮ ರಾಜ್ಯದ ಮುಖ್ಯಮಂತ್ರಿಯೋ.? ಬೇರೆ ರಾಜ್ಯದ ಮುಖ್ಯ ಮಂತ್ರಿಯೋ ತಿಳಿಸಿಬೇಕು. ಬೇರೆ ರಾಜ್ಯಗಳು ಅಭಿವೃದ್ಧಿ ಹೊಂದಿದ ಹಾಗೆ ನಮ್ಮ ರಾಜ್ಯ ಯಾಕೆ ಅಭಿವೃದ್ಧಿ ಹೊಂದುತ್ತಿಲ್ಲ ಎಂಬುದನ್ನು ಜನತೆಗೆ ತಿಳಿಸಬೇಕು. ಎಲ್ಲದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಬೊಟ್ಟು ಮಾಡುವ ಸಿಎಂ ಸಿದ್ದರಾಮಯ್ಯ ದಲಿತರ ಎಸ್ ಟಿ ಪಿ ಹಾಗೂ ಟಿ ಎಸ್ ಪಿ ಹಣವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯದ ಜನತೆಯ ದಿಕ್ಕುತಪ್ಪಿಸುತ್ತಿದ್ದಾರೆ ಎಂದರು.
– ಶಿವಕುಮಾರ