ಎಚ್.ಡಿ.ಕೋಟೆ: ಕರ್ನಾಟ ರಾಜ್ಯ ರಸ್ತೆ ಸಾರಿಗೆ ಬಸ್ ಗಳು ಮಾರ್ಗ ಮಧ್ಯೆ ಕೆಟ್ಟು ನಿಲ್ಲುತಿರುವುದರಿಂದ ಪ್ರಯಾಣಿಕರು ಆತಂಕ್ಕೊಳಗಾಗಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಹಲವು ಸಾರಿಗೆ ಬಸ್ ಗಳು ಮಾರ್ಗ ಮಧ್ಯೆ ಕೆಟ್ಟುನಿಂತಿರುವ ಘಟನೆಗಳು ಮಾಸುವ ಮುನ್ನವೇ ಹೆಚ್.ಡಿ.ಕೋಟೆ ತಾಲೂಕಿನ ಅಲ್ಲಲ್ಲೂ ಸಾರಿಗೆ ಬಸ್ ಗಳು ಮಾರ್ಗ ಮಧ್ಯೆ ಕೆಡುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಆತಂಕ ಮನೆಮಾಡಿದೆ .
ಈ ಹಿಂದೆ ಪ್ರತಿ 9 ಲಕ್ಷ ಕಿ.ಮೀ ಸಂಚರಿಸಿದ ಬಸ್ ಗಳನ್ನು ಗುಜರಿಗೆ ಹಾಕಬೇಕೆಂಬ ನಿಯಮವಿತ್ತು, ಹಿಂದಿನ ಬಿಜೆಪಿ ನಿಯಮವನ್ನು ಸಡಿಲಗೊಳಿಸಿ ರೀಕಂಡಿಷನ್ ಮಾಡಿ 12 ಲಕ್ಷ ಕಿ.ಮೀ ವರೆಗೂ ಓಡಿಸಬಹುದೆಂದು ತಿಳಿಸಿತ್ತು. ಜೊತೆಗೆ ಆರ್ ಟಿ ಓ ಇಲಾಖೆಯಿಂದ ಸಾಮರ್ಥ್ಯ ದೃಢೀಕರಣ ಪತ್ರ ಪಡೆಯಬೇಕೆಂಬ ನಿಯಮವಿದೆ. ಇಷ್ಠಿದ್ದರೂ ಏಕಾಏಕಿ ಕೆಡುತ್ತಿರುವುದು ಈ ನಿಯಮಗಳನ್ನು ಪಾಲಿಸುತ್ತಿಲ್ಲವೇ ಎಂಬ ಅನುಮಾನ ಮೂಡಿದೆ.

ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕಿನ ಬಹುತೇಕ ರಸ್ತೆಗಳು ಸರಿಯಿಲ್ಲದಿರುವುದು ಒಂದೆಡೆಯಾದರೆ, ಏರಿಳಿತದ ಪ್ರದೇಶಗಳಲ್ಲಿ ಏಕಾಏಕಿ ಬಸ್ ಗಳು ಕೆಡುತ್ತಿರುವುದರಿಂದ ಪ್ರಯಾಣಿಕರು ಆತಂಕದಲ್ಲೇ ಪ್ರಯಾಣಿಸುತ್ತಿದ್ದಾರೆ.
ದಿನದ ಕರ್ತವ್ಯ ಮುಗಿಸಿದ ಬಸ್ ಗಳನ್ನು ತಪಾಸಣೆ ಮಾಡಬೇಕು ಹಾಗೂ ಪ್ರತೀವಾರಕ್ಕೊಮ್ಮೆ ಬಸ್ ಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಇಷ್ಠಿದ್ದದ್ದರೂ, ಬಸ್ ಗಳು ಏಕಾಏ ಕೆಟ್ಟು ನಿಲ್ಲುತ್ತಿರುವುದು ಯಕ್ಷಪ್ರಶ್ನೆಯಾಗಿದೆ. ಅಲ್ಲದೇ, ಇತ್ತೀಚೆಗೆ ಕೆಎಸ್ ಆರ್ ಟಿಸಿ ಗೆ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಳ್ಳಲಾಗಿದ್ದು, ಬಸ್ ಗಳಿಂದ ಅಪಘಾತಗಳು ಸಂಭವಿಸಿದರೆ ಇವರಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ. ಗುತ್ತಿಗೆ ಚಾಲಕರು ಜೀವಭಯದಲ್ಲೇ ದಿನದ ಕರ್ತವ್ಯ ಮುಗಿಸುವಂತಾಗಿದೆ.

ಹುಣಸೂರು-ಬೇಗೂರು ಮುಖ್ಯರಸ್ತೆಯ ದೇವಲಾಪುರ ಗ್ರಾಮದ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ಸಾರಿಗೆ ಬಸ್ ಕೆಟ್ಟುನಿಂತಿತ್ತು, ಭಾನುವಾರ ಮಧ್ಯಾಹ್ನ ಬಿಡಗಲು ಸಮೀಪದ ಪೆಟ್ರೋಲ್ ಬಂಕ್ ಬಳಿ ಸಾರಿಗೆ ಬಸ್ ಕೆಟ್ಟಿತ್ತು. ಸೋಮವಾರ ಮುಂಜಾನೆ ಜಕ್ಕಹಳ್ಳಿ ಗ್ರಾಮದ ಎತ್ತರದ ರಸ್ತೆಯಲ್ಲಿ ಸರಗೂರಿನಿಂದ ಹೆಚ್.ಡಿ.ಕೋಟೆಗೆ ತೆರಳುತ್ತಿದ್ದ ಬಸ್ ಕೆಟ್ಟಿತ್ತು. ಅದೇ ದಿನ ಮುಂಜಾನೆ ತುಂಬಸೋಗೆಯ ಕಪಿಲಾ ನದಿಯ ಸಮೀಪ ಸರಗೂರು – ಮೈಸೂರು ತಡೆ ರಹಿತ ವಾಹನ ಕೆಟ್ಟುನಿಂತಿತ್ತು, ಇದನ್ನು ಮಧ್ಯಾಹ್ನವಾದರೂ ಯಾವೊಬ್ಬ ಅಧಿಕಾರಿಯು ಇದನ್ನು ಪರಿಶೀಲಿಸದಿರುವುದು ಸಹಜವಾಗಿಯೇ ಸಾರ್ವಜನಿಕರು ಆಕ್ರೋಶಕ್ಕೀಡಾಗುಂವಂತೆ ಮಾಡುವುದರ ಜೊತೆಗೆ, ಇದೇ ಮಾರ್ಗದಲ್ಲಿ ಈ ರೀತಿಯ ಸಮಸ್ಯೆಯಾಗುತ್ತಿರುವುದರಿಂದ ಉದ್ದೇಶ ಪೂರ್ವಕವಾಗಿಯೇ ಕೆಟ್ಟಿರುವ ಬಸ್ ಗಳನ್ನು ಬಿಡುತ್ತಿದ್ದಾರೆಯೇ ಎಂಬ ಅನುಮಾನ ಪ್ರಯಾಣಿಕರಲ್ಲಿಮನೆ ಮಾಡಿದೆ.

ಏರಿಳಿತ, ಕಿರಿದಾದ ರಸ್ತೆಗಳಲ್ಲಿ ಬ್ರೇಕ್ ವೈಫಲ್ಯ, ಆಕ್ಸೆಲ್ ಕಟ್ ಆಗುವುದು ಸೇರಿದಂತೆ ಇತರೆ ಕಾರಣಗಳಿಗೆ ಏಕಾಏಕಿ ಬಸ್ ಗಳು ಕೆಟ್ಟುನಿಲ್ಲುವುದರಿಂದ ಪ್ರಯಾಣಿಕರ ಜೊತೆಗೆ ಕರ್ತವ್ಯ ನಿರತ ಚಾಲಕ, ನಿರ್ವಾಹಕರು ಆತಂಕಕ್ಕೊಳಗಾಗಿದ್ದಾರೆ.
ಆಗಿಂದಾಗೆ ಬಸ್ ಪ್ರಯಾಣ ದರ ಏರಿಸುವ ನಿಗಮ ಹಾಗೂ ಸರ್ಕಾರ ಪ್ರಯಾಣಿಕರಿಗೆ ಸುರಕ್ಷಿತ ಸೌಲಭ್ಯ ನೀಡುವುದನ್ನು ಮರೆತು, ಗುಣಮಟ್ಟದ ಸಾರಿಗೆ ವ್ಯವಸ್ಥೆ ನೀಡುವುದಕ್ಕೆ ಮುಂದಾಗದೆ, ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
- ಶಿವಕುಮಾರ ಕೋಟೆ