ಎಚ್.ಡಿ.ಕೋಟೆ:ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವಗಳನ್ನು ನಾವು ಪಾಲಿಸುತ್ತಿಲ್ಲ-ಕೇವಲ ಪ್ರತಿಮೆಗಳನ್ನು ಮಾತ್ರ ಸ್ಥಾಪನೆ ಮಾಡಲಾಗಿದೆ-ಡಾ.ಪುಟ್ಟನಂಜಯ್ಯ ಬೇಸರ

ಎಚ್.ಡಿ.ಕೋಟೆ:ಶ್ರೀ ಮಹರ್ಷಿ ವಾಲ್ಮೀಕಿ ಅವರ ತತ್ವಗಳನ್ನು ನಾವು ಪಾಲಿಸುತ್ತಿಲ್ಲ.ಕೇವಲ ಪ್ರತಿಮೆಗಳನ್ನು ಮಾತ್ರ ಸ್ಥಾಪನೆ ಮಾಡಲಾಗಿದೆ,ಎಂದು ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಉಪನ್ಯಾಸಕ ಹಾಗೂ ಮುಖ್ಯ ಭಾಷಣಕಾರ ಡಾ.ಪುಟ್ಟನಂಜಯ್ಯ ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸರ್ಕಾರದ ವತಿಯಿಂದ ತಾಲೂಕಿನ‌ ಮಿನಿ ವಿಧಾನಸೌಧದಲ್ಲಿ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿ, ರಾಮಾಯಣವನ್ನು ಪ್ರತಿನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಎಲ್ಲರೂ ಪಾಲಿಸುತ್ತಿದ್ದೇವೆ. ರಾಮಾಯಣ ರಚಿಸಿದ ಮಹಾ ಕವಿಯನ್ನು ಜಾತಿಯ ಸಂಕೋಲೆಗೆ ಸಿಲುಕಿಸಿ ಕೇವಲ ಒಂದು ಜಾತಿಗೆ ಸೀಮಿತಗೊಳಿಸಿದ್ದಾರೆ, ದಾರ್ಶನಿಕರು ಹಾಗೂ ಮಹನೀಯರು ಒಂದು ಜನಾಂಗಕ್ಕೆ ಸೀಮಿತವಾಗಬಾರದು ಎಂದು ತಿಳಿಸಿದರು.

ನಾವು ಮಹನೀಯರ ಆದರ್ಶಗಳನ್ನು ಪಾಲಿಸುವ ಕೆಲಸವಾಗಬೇಕು. ಗ್ರಾಮೀಣ ಭಾಗದ ಶಾಲಾ, ಕಾಲೇಜುಗಳಲ್ಲಿ‌ ಮಹನೀಯರ ಜಯಂತಿಗಳನ್ನು ಆಚರಿಸುವ ಮೂಲಕ ಅವುಗಳನ್ನು ಪಾಲಿಸುವಂತೆ ಮಕ್ಕಳಿಂದಲೇ ಕಲಿಸಬೇಕು ಎಂದು ತಾಲೂಕು ಆಡಳಿತಕ್ಕೆ ಕಿವಿ ಮಾತು ಹೇಳಿದರು.

ದೇಶದಲ್ಲಿ ಮಹಾ ಕವಿ ಮಹರ್ಷಿ ವಾಲ್ಮೀಕಿಯವರು ರಾಮನನ್ನ ಹಾಗೂ ಅವರ ಪಾತ್ರಗಳನ್ನು ಎಳೆ ಎಳೆಯಾಗಿ ಬಿಡಿಸಿಕೊಟ್ಟಿದ್ದಾರೆ. ಅಂತಹ ಮಹನೀಯ ವಾಲ್ಮೀಕಿ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಬೇಕು ಎಂದು ತಿಳಿಸಿದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ರಾಮನ ಬಗ್ಗೆ ಪರಿಚಯಿಸಲು ವಾಲ್ಮೀಕಿ ಬರಬೇಕಾಯಿತು. ಹಾಗೆಯೇ ಕಲಿಯುಗದಲ್ಲಿ ಸಮಾನತೆ ತರಲು ಡಾ.ಬಿ‌.ಆರ್.ಅಂಬೇಡ್ಕರ್ ಅವರು ಬರಬೇಕಾಯಿತು ಎಂದು ಅಭಿಪ್ರಾಯ ಪಟ್ಟರು.

ಇತಿಹಾಸದಲ್ಲಿ ಅನೇಕ ವಿಷಯಗಳನ್ನು ಕಲಿತಿದ್ದೇವೆ ಅದನ್ನು ಕಾನೂನಾತ್ಮಕವಾಗಿ ನಡೆಯಲು ಅಂಬೇಡ್ಕರ್ ಅವರು ದಾರಿ ತೋರಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿಗಳ ದರ್ಶನ

ಪಟ್ಟಣದ ಮಿನಿ ವಿಧಾನಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆವರಣಾ ಸಮಿತಿ ಹಾಗೂ ಸರ್ಕಾರದ ವತಿಯಿಂದ ಆಚರಿಸಿಲಾದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿತ್ತು, ಕಾರ್ಯಕ್ರಮಕ್ಕೆ ಸಾರ್ವಜನಿಕರು ಬಾರದೇ ಇದ್ದುದ್ದರಿಂದ ಹಾಗೂ ತಾಲೂಕು ಕಚೇರಿಯ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರು ಗೈರಾಗಿದ್ದರಿಂದ ಕುರ್ಚಿಗಳು ಖಾಲಿ, ಖಾಲಿಯಾಗಿದ್ದವು. ಕಾರ್ಯಕ್ರಮಕ್ಕೆ ಗೈರಾಗಿರುವ ಅಧಿಕಾರಿಗಳು ಹಾಗೂ ನೌಕರರ ವಿರುದ್ಧ ಶಿಸ್ತುಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡುವಂತೆ ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ ಅವರು ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಸೂಚಿಸಿದರು.

ವೃತ್ತ ನಿರೀಕ್ಷಕ ಸಬ್ಬಿರ್ ಹುಸೇನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಿಕ್ಕವೀರನಾಯ್ಕ, ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ಐಡಿಯಾ ವೆಂಕಟೇಶ್, ನಾಗರಾಜ್, ನಾಯಕ ಸಮಾಜದ ಅಧ್ಯಕ್ಷ ಶಂಭುಲಿಂಗನಾಯ್ಕ, ಎಮ್.ಸಿ.ದೊಡ್ಡನಾಯ್ಕ, ಮುಖ್ಯಾಧಿಕಾರಿ ಪಿ.ಸುರೇಶ್, ವಡ್ಡರಗುಡಿಚಿಕ್ಕಣ, ಬೆಟ್ಟಸ್ವಾಮಿ, ಚಾಕಳ್ಳಿಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

——————--ಶಿವು ಕೋಟೆ

Leave a Reply

Your email address will not be published. Required fields are marked *

× How can I help you?