ಎಚ್.ಡಿ.ಕೋಟೆ: ಅವಳಿ ತಾಲೂಕಿನ ಅಧಿದೇವತೆ ಚಿಕ್ಕದೇವಮ್ಮನವರ ಜಾತ್ರಾ ಮಹೋತ್ಸವವು ಕಪಿಲಾ ನದಿಯ ಹಾಲುಗಡುವಿನ ಜಪದ ಕಟ್ಟೆಯಲ್ಲಿ ವಿಜೃಂಭಣೆಯಿಂದ ನೆರವೇರಿತು.
ಯುಗಾದಿ ಹಿನ್ನೆಲೆ ಪ್ರಸಿದ್ದ ಯಾತ್ರಾ ಸ್ಥಳ ಶ್ರೀಚಿಕ್ಕ ದೇವಮ್ಮನವರ ಬೆಟ್ಟದಲ್ಲಿ ಯುಗಾದಿಯ ವಿಶೇಷ ಪೂಜಾ ಕೈಂಕರ್ಯಗಳನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪುರೋಹಿತರು ನೆರವೇರಿಸಿದರು.
ಮುಂಜಾನೆಯಿಂದಲೇ ವಿಶೇಷ ಪೂಜೆ:
ಚಂದ್ರಮಾನ ಯುಗಾದಿ ದಿನದಂದು ಬೆಟ್ಟದಲ್ಲಿ ಮುಂಜಾನೆ 4 ಗಂಟೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸಲಾಯಿತು.
ತಾಲೂಕಿನ ಖಜಾನೆಯಲ್ಲಿರುವ ಅಮ್ಮನವರ ಮೂರ್ತಿಯನ್ನು ಹೆಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಕಂದಾಯ ಅಧಿಕಾರಿಗಳು ಪೊಲೀಸರ ಸಮ್ಮುಖದಲ್ಲಿ ಜಾತ್ರಾ ಕಮಿಟಿಯವರಿಗೆ ಹಾಗೂ ಗ್ರಾಮಸ್ಥರಿಗೆ ಹಸ್ತಾಂತರಿಸಿದರು.
ಕಂದಾಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಅಪಾರ ಸಂಖ್ಯೆಯ ಭಕ್ತರು ಭಾಗಿ :
ಬೆಂಗಳೂರು, ಮೈಸೂರು, ಚಾಮರಾಜನಗರ ರಾಜ್ಯ ಸೇರಿದಂತೆ ಹೊರ ರಾಜ್ಯಗಳ ಅಪಾರ ಸಂಖ್ಯೆಯ ಭಕ್ತರು ಭಾಗವಹಿ ಸಿದ್ದರು. ಪ್ರತೀ ವರ್ಷದಂತೆ ಭಕ್ತರು ಕಾಲ್ನಡಿಗೆಯಲ್ಲಿ ಸಾಗಿ, ಕಪಿಲಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ಬೆಟ್ಟ ಹತ್ತಿ ದೇವರ ದರ್ಶನ ಪಡೆದು ಪುನೀತರಾದರು. ಹರಕೆ ಹೊತ್ತ ಮಹಿಳೆಯರು ಮತ್ತು ಮಕ್ಕಳು ಬಾಯಿಬೀಗ ಸೇವೆಯಲ್ಲಿ ಪಾಲ್ಗೊಂಡು ಭಕ್ತಿ ಪರಾಕಷ್ಠೆ ಮೆರೆದರು.
ಬೆ.9 ಗಂಟೆಯ ಸಮಯದಲ್ಲಿ ಅಲಂಕೃತ ಅಮ್ಮನವರನ್ನು ಇಟ್ನ ಗ್ರಾಮಸ್ಥರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಮಂಗಳವಾದ್ಯ, ಮಂತ್ರ ಘೋಷಗಳು, ಸತ್ತಿಗೆ ಸಮೇತ ಜೈಕಾರಗಳೊಂದಿಗೆ ಬೆಟ್ಟದಿಂದ ಕೆಳಗಿಳಿಸಿ, ಹಾಲುಗಡು ವಿನ ಕಪಿಲಾ ನದಿಯ ಜಪದ ಕಟ್ಟೆಯಲ್ಲಿ ಕುಳ್ಳಿರಿಸಿ, ವಿಶೇಷ ಪೂಜಾದಿಗಳನ್ನು ನೆರವೇರಿಸಿದರು. ಮುಡಿ ಸೇವೆ ಸೇರಿದಂತೆ ಇತರೆ ಸೇವೆಗಳಲ್ಲಿ ಭಕ್ತರು ಪಾಲ್ಗೊಂಡಿದ್ದರಲ್ಲದೇ, ತಮ್ಮ ಹರಕೆಗಳನ್ನು ಅರ್ಪಿಸಿದರು.

ಅಕ್ಕ-ಪಕ್ಕದ ಗ್ರಾಮಸ್ಥರು, ಕಂದಾಯ ಇಲಾಖೆ ಅಧಿಕಾರಿಗಳು, ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ನೆರದಿದ್ದರು. ಸರಗೂರು ಪೊಲೀಸ್ ಠಾಣೆ ವತಿಯಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು.