ಚಿಕ್ಕಮಗಳೂರು;ಕ್ಷೇತ್ರದ ಅಭಿವೃದ್ಧಿಯ ವಿಷಯದಲ್ಲಿ ಶಾಸಕ ಹೆಚ್ ಡಿ ತಮ್ಮಯ್ಯ ಹಾಗು ನಾನು ಜೋಡೆತ್ತಿನಂತೆ ಕೆಲಸ ಮಾಡಲಿದ್ದೇವೆ ಎಂದು ವಿಧಾನಪರಿಷತ್ ಸದಸ್ಯರಾದ ಸಿ ಟಿ ರವಿಯವರು ಹೇಳಿದರು.
ತಾಲ್ಲೂಕಿನ ಹಿರೇಮಗಳೂರು ಗ್ರಾಮದ ಪುರಾತನ ಇತಿಹಾಸವುಳ್ಳ ಶ್ರೀ ದೊಡ್ಡ ಮುತ್ತಿನಮ್ಮ ಹಾಗೂ ಶ್ರೀ ಕೆಂಚರಾಯ ಸ್ವಾಮಿ ದೇವಾಲಯದ ಜೀರ್ಣೋದ್ದಾರ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜಕೀಯ ಪ್ರತಿನಿಧಿಗಳ ಅಧಿಕಾರ ಎಂದಿಗೂ ಶಾಶ್ವತವಲ್ಲ.ಹುಟ್ಟು-ಸಾವು ಮನುಷ್ಯನ ಕೈಯಲಿಲ್ಲ.ಎಲ್ಲವೂ ದೈವ ನಿಶ್ಚಿಯದಂತಿರುತ್ತದೆ.ಜೀವಸಂಕುಲದಲ್ಲಿ ಪ್ರತಿಯೊಬ್ಬರಿಗೂ ಸಾವು ಎಂಬುದು ಖಚಿತ.ಈ ನಡುವಿನ ಅಂತರದಲ್ಲಿ ಕೈಗೊಂಡoತಹ ಉತ್ತಮ ಕಾರ್ಯ ಹಾಗೂ ಅಭಿವೃದ್ದಿಗಳೇ ಶಾಶ್ವತವಾಗಿರಲಿದೆ.ನಾವುಗಳು ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡಾ ಅಭಿವೃದ್ದಿ ವಿಚಾರದಲ್ಲಿ ಒಂದಾಗಿ ನಿಂತಿದ್ದೇವೆ.ಮುಖ್ಯವಾಗಿ ರೈತರ ವಿಚಾರದಲ್ಲಿ ಒಗ್ಗಟ್ಟಿನಿಂದ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಕೆರೆಯ ನೀರು ಕೆರೆಗೆ ಚೆಲ್ಲು ಎಂಬ ನಾಣ್ನುಡಿಯಂತೆ ಜನರಿಂದ ಅಧಿಕಾರ ಪಡೆದು ಜನರಿಗಾಗಿ ದುಡಿಯುವುದೇ ಮೂಲ ಕಾಯಕ.ಆ ನಿಟ್ಟಿನಲ್ಲಿ ದೇವಾಲಯದ ಅಭಿವೃದ್ದಿ,ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಮುಖ್ಯ ಧ್ಯೇಯವಾಗಬೇಕು ಎಂದು ಸಿ.ಟಿ.ರವಿ ಹೇಳಿದರು.
ಅನೇಕ ವರ್ಷಗಳಿಂದ ಜನರಿಂದ ಅಧಿಕಾರ ಪಡೆದು ಒಂದೊoದು ಗಳಿಗೆಯು ಜನಸಾಮಾನ್ಯರ ಸೇವೆಗೆ ವಿನಿಯೋಗಿಸಿದ್ದೇವೆ.ಹಿರೇಮಗಳೂರು ಗ್ರಾಮ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ದೇವಾಲಯ ಜೀರ್ಣೋದ್ದಾರ,ಅಂಬೇಡ್ಕರ್ ಸಮುದಾಯ ಭವನ,ಮೂಲಭೂತ ಸವಲತ್ತು ಒದಗಿಸಲು ಶ್ರಮಿಸಿದ್ದೇನೆ. ಹಿರೇಮಗಳೂರಿನ ದೇವಾಲಯ,ಕಲ್ಯಾಣಿ ವಿಚಾರದಲ್ಲಿ ಗ್ರಾಮಸ್ಥರು ಅಭಿವೃದ್ದಿಗೆ ಅರ್ಜಿ ಸಲ್ಲಿಸಿಲ್ಲ.ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅರಿತು ಜೀರ್ಣೋದ್ದಾರಕ್ಕೆ ತಮ್ಮ ಅಧಿಕಾರಾವಧಿಯಲ್ಲಿ ಹಣ ಬಿಡುಗಡೆಗೊಳಿಸಿದ್ದೇನೆ.ಆ ಸಮಯದಲ್ಲಿ ಹಾಲಿ ಶಾಸಕರು ನಮ್ಮೊಟ್ಟಿಗೆ ಕೆಲಸ ನಿರ್ವಹಿಸಿದ್ದರು.ಇದೀಗ ಪಕ್ಷ ಬೇರೆ ಆಗಿರಬಹುದು ಆದರೆ ಕ್ಷೇತ್ರದ ಅಭಿವೃದ್ದಿಗೆ ಜೋಡೆತ್ತಿನಂತೆ ಕೆಲಸ ನಿರ್ವಹಿಸಲು ಬದ್ಧರಾಗಿದ್ದೇವೆ ಎಂದರು.
ಶ್ರೀ ದೊಡ್ಡ ಮುತ್ತಿನಮ್ಮ ಹಾಗೂ ಶ್ರೀ ಕೆಂಚರಾಯ ಸ್ವಾಮಿ ದೇವಾಲಯದ ಜೀರ್ಣೋದ್ದಾರಕ್ಕೆ 85 ಲಕ್ಷ ರೂ. ಮಂಜೂರುಗೊಳಿಸಿ, 59 ಲಕ್ಷ ರೂ.ಬಿಡುಗಡೆಗೊಳಿಸಿದ್ದು ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿರುವ ಕಾರಣ ಹಾಲಿ ಶಾಸಕ ತಮ್ಮಯ್ಯರು ಉಳಿದಂತಹ ಮೊತ್ತವನ್ನು ಬಿಡುಗಡೆಗೊಳಿಸಿ ಗ್ರಾ ಮಸ್ಥರಿಗೆ ಸಹಾಯ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಕಳೆದೆರಡು ವರ್ಷಗಳಲ್ಲಿ ಹಿಂದಿನ ಶಾಸಕರು ಅಭಿವೃದ್ದಿಗೆ ಕಾಮಗಾರಿಗೆ ಮುಂದುವರೆದ ಭಾಗವಾಗಿ ತಾವುಗಳು ಕೆಲಸ ಮಾಡುತ್ತಿದ್ದೇವೆ.ಪ್ರಸ್ತುತ ನಾವುಗಳು ಬೇರೆ ಬೇರೆ ಪಕ್ಷದಲ್ಲಿದ್ದರೂ ಕೂಡಾ ಅಭಿವೃದ್ದಿ ವಿಚಾರದಲ್ಲಿ ಒಂದಾಗಿ ನಿಂತಿದ್ದೇವೆ.
ದೇಶದ ಪ್ರಧಾನ ಮಂತ್ರಿಗಳು ರೈಲ್ವೆ ಅಭಿವೃದ್ದಿಯಲ್ಲಿ ಹೊಸ ಯೋಜನೆಗಳು ಜಾರಿಗೊಳಿಸಿಲ್ಲ.ಹಳೇ ಯ ರೈಲ್ವೆಗಳನ್ನೇ ಸಂಪೂರ್ಣ ಸರಿಪಡಿಸಿ ಹೈಟೆಕ್ ನಿಲ್ದಾಣಗಳನ್ನಾಗಿ ನಿರ್ಮಿಸಿದ್ದಾರೆ.ಆ ನಿಟ್ಟಿನಲ್ಲಿ ಹಿಂದಿನ ಸರ್ಕಾರ ಹಾಗೂ ಶಾಸಕರು ಅಭಿವೃದ್ದಿ ಕಾಮಗಾರಿಗಳ ಅಡೆತಡೆ ಸಡಿಲಿಸಿ, ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸುವುದೇ ಮುಖ್ಯ ಉದ್ದೇಶವಾಗಿದೆ ಎಂದರು.
ದೇವಾಲಯ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ಕೇಶವಮೂರ್ತಿ ಮಾತನಾಡಿ ಶ್ರೀ ಮುತ್ತಿನಮ್ಮ ಹಾಗೂ ಕೆಂಚರಾಯ ದೇವಾಲಯ ಜೀರ್ಣೋದ್ದಾರಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅಧಿಕೃತವಾಗಿ ಚಾಲನೆ ನೀಡಿರುವುದು ಹೆಮ್ಮೆಯ ಸಂಗತಿ.2014ರಲ್ಲಿ ಶಾಸಕರಾದ ಸಿ.ಟಿ.ರವಿ ಹಾಗೂ ಸೇರಿದಂತೆ ಅನೇಕರ ಸಹಕಾರದಿಂದ ದೇವಾಲಯ ಅಭಿವೃದ್ದಿಗೆ ಹಣ ಬಿಡುಗಡೆಗೊಂಡಿದೆ ಎಂದರು.
ದೇವಾಲಯ ಅಭಿವೃದ್ದಿ ದೃಷ್ಟಿಯಿಂದ ಗ್ರಾಮದ ಮಗ ಹಾಗೂ ಶಾಸಕ ಹೆಚ್. ಡಿ.ತಮ್ಮಯ್ಯ ಚುನಾವಣಾ ಪೂರ್ವದಲ್ಲಿ ದೇವಾಲಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವ ಭರವಸೆ ನೀಡಿದ್ದರು.ಹಾಗಾಗಿ ತಮ್ಮಯ್ಯನವರು ಗ್ರಾಮದ ಶ್ರೇಯೋಭಿವೃದ್ದಿಗಾಗಿ ಸರ್ಕಾರದಿಂದ ಅನುದಾನ ಒದಗಿಸಿ ಹಿರೇಮಗಳೂರು ನಿವಾಸಿಗಳಿಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಕೋದಂಡರಾಮಚoದ್ರ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಕಣ್ಣನ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್,ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್,ಶ್ರೀ ಮುತ್ತಿನಮ್ಮ ದೇವಸ್ಥಾನದ ಹಿರೇಮಗಳೂರು ಟ್ರಸ್ಟ್ ಅಧ್ಯಕ್ಷ, ಉಪಾಧ್ಯಕ್ಷ ಹೆಚ್.ಎಸ್.ಪುಟ್ಟಸ್ವಾಮಿ,ಸಿಡಿಎ ಮಾಜಿ ಸದಸ್ಯ ಕೋಟೆ ರಂಗನಾಥ್,ಜಿಲ್ಲಾ ಬಿಜೆಪಿ ಎಸ್ಸಿ ಘಟಕದ ಅಧ್ಯಕ್ಷ ಕುರುವಂಗಿ ವೆಂಕಟೇಶ್, ಟ್ರಸ್ಟ್ ಖಜಾಂಚಿ ಬಸವರಾಜ್, ಮುಖಂಡರುಗಳಾದ ಡಾ|| ಡಿ.ಎಲ್.ವಿಜಯ್‌ಕುಮಾರ್, ಹೆಚ್.ಎಂ.ನಾರಾಯಣ, ರೇವ ನಾಥ್ ಹೆಚ್.ಜೆ. ಶಿವಕುಮಾರ್, ಲೋಕೇಶ್, ಧನಂಜಯ್, ರವಿಕುಮಾರ್, ಶಾಂತಕುಮಾರ್, ಅಶೋಕ್, ಜನಕರಾಜ್ ಮತ್ತಿತರರು ಹಾಜರಿದ್ದರು.
————–ಸುರೇಶ್