ಕೆ.ಆರ್.ಪೇಟೆ:ಸರ್ಕಾರಿ ಕಾರ್ಯಕ್ರಮಕ್ಕೆ ತೆರಳಿ ಹಿಂದಿರುಗುವಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟ ನೀರುಗಂಟಿ ಗಿರಿಜಾ ಮಹದೇವ ರವರ ಕುಟುಂಬಕ್ಕೆ ಮಾನವೀಯತೆ ದೃಷ್ಟಿಯಿಂದ ಸರ್ಕಾರ ಕೂಡಲೆ ಸೂಕ್ತ ಪರಿಹಾರ ನೀಡುವಂತೆ ಶಾಸಕರಾದ ಹೆಚ್.ಟಿ ಮಂಜು ಆಗ್ರಹಿಸಿದರು.
ಭಾನುವಾರ ಪ್ರಜಾಪ್ರಭುತ್ವದ ದಿನ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುವಾಗ ಗಿರಿಜಾ ಮಹದೇವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಪಟ್ಟಣದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹೆಚ್.ಟಿ ಮಂಜು ತಾಲ್ಲೂಕಿನ ಶೀಳನೆರೆ ಹೋಬಳಿಯ ತೆಂಡೇಕೆರೆ ಪಂಚಾಯಿತಿಯಲ್ಲಿ ಕಳೆದ ಒಂದು ವರ್ಷದಿಂದ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಗಿರಿಜಾ ಮಹಾದೇವ (34) ಪ್ರಜಾಪ್ರಭುತ್ವದ ದಿನದ ಅಂಗವಾಗಿ ಶ್ರೀರಂಗಪಟ್ಟಣದಲ್ಲಿ ಆಯೋಜಿಸಿದ್ದ ಮಾನವ ಸರಪಳಿ ಮುಗಿಸಿ ಬಸ್ಸಿನಲ್ಲಿ ತಂಡೆಕೆರೆಗೆ ಬಂದಿದ್ದರು.ಅಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಮೂಲಕ ಗಿರಿಜಾ ಹಾಗೂ ಹುಣಸನಹಳ್ಳಿ ನೀರಗಂಟಿ ಪ್ರಭಾವತಿ ಅವರು ಸ್ವಗ್ರಾಮಕ್ಕೆ ತೆರಳುತ್ತಿದ್ದರು.ಅಂಚೆಮುದ್ದನಹಳ್ಳಿ ಬಳಿ ಚಲಿಸುತ್ತಿದ್ದ ಅವರ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಬಂದ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು ತೀವ್ರ ರಕ್ತಸ್ರಾವದಿಂದ ಗಿರಿಜಾ ಸ್ಥಳದಲ್ಲೇ ಮೃತಪಟ್ಟರೆ,ತೀವ್ರವಾಗಿ ಗಾಯಗೊಂಡ ಪ್ರಭಾವತಿ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಾಗಾಗಿ ಸರ್ಕಾರಿ ಕಾರ್ಯಕ್ರಮಕ್ಕೆ ತೆರಳಿ ಹಿಂತಿರುಗುವ ಸಂದರ್ಭದಲ್ಲಿ ಬಡ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ ಗಿರಿಜಾ ಮರಣದಿಂದ ಮೃತ ಗಿರಿಜಾ ಅವರ ಇಬ್ಬರು ಚಿಕ್ಕ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ.ಈ ಘಟನೆಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಧ್ಯಕ್ಷ ಎ. ಎನ್ ಜಾನಕಿರಾಂ,ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್, ತಾ. ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಜಿಲ್ಲಾ ಜೆಡಿಎಸ್ ಆನೆಗೊಳ ಕಿರಣ್,ಮಾಜಿ ಮನ್ಮುಲ್ ನಿರ್ದೇಶಕ ಸಾರಂಗಿ ನಂಜುಂಡೇಗೌಡ, ಕೊರಟಿಕೆರೆ ದಿನೇಶ್, ಬ್ಯಾಲದಕೆರೆ ನಂಜೇಗೌಡ, ಸೇರಿದಂತೆ ಉಪಸ್ಥಿತರಿದ್ದರು.
—————- ಮನು ಮಾಕವಳ್ಳಿ ಕೆ ಆರ್ ಪೇಟೆ