ಹಳೇಬೀಡು;-ತಾಲೂಕಿನಲ್ಲಿರಬಹುದಾದ ಐತಿಹಾಸಿಕ ವಿಗ್ರಹಗಳ ಸಂಶೋಧನೆಗೆ ಅಧ್ಯಯನ ಪೀಠ ಸ್ಥಾಪನೆ-ಶ್ರೀ ಡಾ.ವಿರೇಂದ್ರ ಹೆಗ್ಗಡೆ ಘೋಷಣೆ

ಬೇಲೂರು;-ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ ಹೆಚ್ಚು-ಹೆಚ್ಚು ಪುರಾತನ ಮತ್ತು ಐತಿಹಾಸಿಕ ವಿಗ್ರಹಗಳು ಲಭ್ಯವಾಗುತ್ತಿರುವ ಹಿನ್ನಲೆಯಲ್ಲಿ ಇಲ್ಲಿಯೇ ಸಂಶೋಧನೆ ನಡೆಸಲು ಅನುವು ಮಾಡಲು ಧರ್ಮಸ್ಥಳ ಧರ್ಮೋತ್ಥಾನ ಸಂಸ್ಥೆಯಿಂದ ಶೀಘ್ರವೇ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಶ್ರೀ ಡಾ.ವಿರೇಂದ್ರ ಹೆಗ್ಗಡೆಯವರು ಹೇಳಿದರು.

ತಾಲ್ಲೂಕಿನ ಮಾದೀಹಳ್ಳಿ ಶಿವಪುರ ಕಾವಲು ಜೈನರಗುತ್ತಿಯಲ್ಲಿ ಹಮ್ಮಿಕೊಂಡಿದ್ದ ಪಂಚಕಲ್ಯಾಣೋತ್ಸವ ಹಾಗೂ 24 ಅಡಿ ಶಿತಲನಾಥ ತೀರ್ಥಂಕರರ ವಿಗ್ರಹ ಲೋಕಾರ್ಪಣೆ ಕಾರ್ಯಕಮಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹೊಯ್ಸಳ ಕಾಲಘಟ್ಟದಲ್ಲಿ ಅತಿಕ್ರಮಣಕ್ಕೆ ಒಳಪಟ್ಟು ಸಾವಿರಾರು ಐತಿಹ್ಯ ಸಾರುವ ವಿಗ್ರಹಗಳು ಮಣ್ಣು ಪಾಲಾಗಿವೆ. ಅಲ್ಲದೆ ಮೂರ್ತಿಗಳು ಭಿನ್ನವಾಗಿದೆ. ಈಗಾಗಲೇ ಧರ್ಮಸ್ಥಳ ಸಂಸ್ಥೆಯಿಂದ ಕೆಲವು ವಿಗ್ರಹಗಳನ್ನು ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.ವಿಶೇಷವಾಗಿ ಬೇಲೂರು-ಹಳೇಬೀಡು ಬಳಿಯಲ್ಲಿನ ಸಂಶೋಧನೆಯಲ್ಲಿ ಜೈನಮೂರ್ತಿಗಳು ಲಭ್ಯವಾಗಿದೆ.ನಮ್ಮ ಐತಿಹಾಸಿಕ ಹಿನ್ನಲೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಮಹತ್ವಪೂರ್ಣ ಕಾರ್ಯವನ್ನು ಕೈಗೊಳ್ಳಬೇಕಿದೆ ಎಂದರು.

ಸದ್ಯ ಜೈನರಗುತ್ತಿ ಕೂಡ ಐತಿಹಾಸಿಕ ಪರಂಪರೆಯನ್ನು ಹೊಂದಿರುವ ನಿಟ್ಟಿನಲ್ಲಿ ಇಲ್ಲಿನ ಮುನಿಶ್ರೇಷ್ಠರು ಕ್ಷೇತ್ರದ ಅಭಿವೃದ್ಧಿಗೆ ಅವಿರತ ಸೇವೆಯನ್ನು ನೀಡುವ ಮೂಲಕ ಜೈನರಗುತ್ತಿಯನ್ನು ಸುಕ್ಷೇತ್ರವಾಗಿ ಮಾಡಿದ್ದಾರೆ. ಮುಂದಿನ ದಿನದಲ್ಲಿ ಧರ್ಮಸ್ಥಳ ಸಂಸ್ಥೆ ಎಲ್ಲಾ ರೀತಿಯ ಸಹಕಾರವನ್ನು ನೀಡುವ ಇಂಗಿತವನ್ನು ವ್ಯಕ್ತ ಪಡಿಸಿದ ಅವರು ಈ ಕಾರ್ಯಕ್ಕೆ ಪುಷ್ಪಗಿರಿ ಶ್ರೀಗಳು ಆಗಮಿಸಿ ಧರ್ಮ ಸಾಮರಸ್ಯ ಮರೆದಿದ್ದಾರೆ ಎಂದರು.

ಪುಷ್ಪಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯರಾದ  ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು  ಮಾತನಾಡಿ, ಸುಮಾರು 900 ವರ್ಷಗಳ ಗತವೈಭವ ಸಾರುವ ಜೈನರಗುತ್ತಿ ಕ್ಷೇತ್ರದ ಸಕಲ ಅಭಿವೃದ್ಧಿಗೆ ಇಲ್ಲಿನ ಪೂಜ್ಯ ಶ್ರೀ ವೀರಸಾಗರಮುನಿಗಳು ಶ್ರಮಿಸಿದ್ದಾರೆ. ವಿಶೇಷವಾಗಿ ಹಳೇಬೀಡು ಸುತ್ತ-ಮುತ್ತಲು ಇಂದಿಗೂ ಜೀನಮೂರ್ತಿಗಳು ಮಣ್ಣಿನಲ್ಲಿ ಲಭ್ಯವಾಗುತ್ತಿರುವ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿದೆ.ಈಗಾಗಲೇ ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಶ್ರೀ ವಿರೇಂದ್ರ ಹಗ್ಗೆಡೆಯವರು ಧರ್ಮಸ್ಥಳ ಧಮೋತ್ಥಾನ ಸಂಸ್ಥೆ ಸ್ಥಾಪಿಸಿ  ನೂರಾರು ದೇಗುಲ ಮತ್ತು ಸಾವಿರಾರು ವಿಗ್ರಹಗಳನ್ನು ಸಂರಕ್ಷಿಸಲು ಸಹಕರಿಸಿದ್ದಾರೆ. ಅವರ ಈ  ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದರು.

,

Leave a Reply

Your email address will not be published. Required fields are marked *

× How can I help you?