ಹಾಸನ-ಇತಿಹಾಸವನ್ನು ನೆನೆದು ವರ್ತಮಾನವನ್ನು ವ್ಯರ್ಥಮಾಡಬೇಡಿ,ಮುಂದೆ ವರ್ತಮಾನವೇ ಇತಿಹಾಸವಾಗುತ್ತದೆ ಎಂದು ಸಾಹಿತಿ,ಪತ್ರಕರ್ತರಾದ ಚಲಂ ಹಾಡ್ಲಹಳ್ಳಿ ಹೇಳಿದರು.
ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕನ್ನಡ ನಾಡು,ನುಡಿ ಚಿಂತನೆ ಎಂಬ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ಕನ್ನಡವನ್ನು ಉಳಿಸಬೇಕಾದ ಅನಿವಾರ್ಯತೆ ಇನ್ನೂ ಎದುರಾಗಿಲ್ಲ. ಭಾಷೆಗಳ ವಿಚಾರದಲ್ಲಿ ಮಡಿವಂತಿಗೆ ಬಿಟ್ಟು ಇತರ ಭಾಷೆಗಳೊಡನೆ ಕನ್ನಡ ಭಾಷೆ ಬಳಸುವುದರಿಂದ ಕನ್ನಡ ಅತೀ ಎತ್ತರಕ್ಕೆ ಬೆಳೆಯುತ್ತದೆ.
ಸಾಹಿತ್ಯ ಕ್ಷೇತ್ರದಲ್ಲಿ ಕನ್ನಡ ತನ್ನದೇ ಆದ ವಿಶೇಷ ಚಾಪು ಮೂಡಿಸಿದೆ.ಯಾವುದೇ ಅನ್ಯ ಭಾಷೀಯ ಸಾಹಿತಿಯಾಗಲಿ, ಕವಿಯಾಗಲಿ, ಸಾಹಿತ್ಯ ರಚಿಸಲು ಮೊದಲು ಆಯ್ಕೆ ಮಾಡುವ ಭಾಷೆ ಕನ್ನಡ.ಏಕೆಂದರೆ ಬರವಣಿಗೆಯಲ್ಲಿ ಕನ್ನಡ ಭಾಷೆಯಲ್ಲಿ ಸಿಗುವ ಸ್ವಾತಂತ್ರ್ಯ ಬೇರೆ ಭಾಷೆಗಳಲ್ಲಿ ಕಾಣಲು ಸಿಗುವುದಿಲ್ಲ.
ನಂಜುಂಡ ಕವಿಯ ಕುಮಾರರಾಮನ ಸಾಂಗತ್ಯ ಅಥವಾ ರಾಮನಾಥ ಚರಿತೆ ಕನ್ನಡದ ಮೊಟ್ಟ ಮೊದಲ ಚಾರಿತ್ರಿಕ ಕಾವ್ಯ ಮತ್ತು ವೀರಕಾವ್ಯ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.ಕನ್ನಡದ ಬೆಳವಣಿಗೆಗೆ ವಿಜಯ ನಗರ ಸಾಮ್ರಾಜ್ಯದ ಹಕ್ಕ-ಬುಕ್ಕರ ಕೊಡುಗೆ ಅಪಾರವಾದುದ್ದು. ಅಂದಿನಿಂದ ಇಲ್ಲಿಯವರೆಗೆ ಕನ್ನಡ ಬಹಳಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡದ ಇತಿಹಾಸ ಮತ್ತು ಚಿಂತನೆಯ ಕುರಿತು ಕಾನೂನು ವಿದ್ಯಾರ್ಥಿಗಳು ಮಾತನಾಡಿದರು.
ಈ ವೇಳೆ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶೀನಾ ಥಾಮಸ್, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳು ಹಾಗೂ ಸಾಂಸ್ಕೃತಿಕ ಸಂಚಾಲಕರಾದ ಲೇಪಾಕ್ಷಯ್ಯ ಎಸ್.ವಿ, ಉಪನ್ಯಾಸಕರಾದ ಡಾ. ಗಣೇಶ್ ಹೆಗ್ಗಡೆ, ಡಾ. ಶಿವಣ್ಣ ನಾಯ್ಕ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಮಹದೇವಪ್ಪ, ಸುಮಾ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.