
ಹಾಸನ-ಹಾಸನ ಆಕಾಶವಾಣಿಯ ಹಳ್ಳಿಧ್ವನಿ ಕಾರ್ಯಕ್ರಮವು ನಾಳೆ ಹಾಸನ ತಾಲ್ಲೂಕು ಬಸವಾಘಟ್ಟ ಗ್ರಾಮದಲ್ಲಿ ನಡೆಯಲಿದೆ ಎಂದು ಆಕಾಶವಾಣಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಗ್ಗೆ 11 ಗಂಟೆಯಿoದ ಬಸವಾಘಟ್ಟದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ಬಸವಾಘಟ್ಟ ಗ್ರಾಮದ ಸ್ಥಳನಾಮದ ಹಿನ್ನೆಲೆ,ಕೃಷಿ ‘ಸಾಮಾಜಿಕ ಬದುಕು, ಅಲ್ಲಿಯ ಸಂಘ ಸಂಸ್ಥೆಗಳ ಕಾರ್ಯಚಟುವಟಿಕೆ,ದೇವಸ್ಥಾನಗಳು, ಸಾಧಕರು, ಪ್ರತಿಭಾವಂತರು, ಕಲಾವಿದರು, ವಿವಿಧ ವೃತ್ತಿಬಾಂಧವರ ವಿಚಾರ, ಅಲ್ಲಿಯ ಅಭಿವೃದ್ದಿ, ಕುಂದು ಕೊರತೆಗಳು, ಸಮಸ್ಯೆಗಳು–ಹೀಗೆ ಹತ್ತಾರು ಸಂಗತಿಗಳ ಮೇಲೆ ಬೆಳಕು ಚೆಲ್ಲಲಾಗುತ್ತದೆ.ಈ ವಿಷಯಗಳನ್ನು ಧ್ವನಿ ಮುದ್ರಿಸಿಕೊಂಡು ಪ್ರಸಾರ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಹಾಸನದ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರು ಭಾಗವಹಿಸುತ್ತಿದ್ದು,ಹಾಸನ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉಪ ಮಹಾ ಪ್ರಬಂಧಕರಾದ ನಾರಾಯಣ್, ಹಾಸನದ ಕ್ಷೇತ್ರ ಶಿಕ್ಷಣ ಅಧಿಕಾರಿ ಮಂಜುಳಾ, ಹಿರಿಯ ಶಿಕ್ಷಕರಾದ ಬಿ.ಡಿ. ಶಂಕರೇಗೌಡ, ಉಪನ್ಯಾಸಕರಾದ ಬಿ.ಎಸ್. ಮಂಜುನಾಥ್, ಬಸವಾಘಟ್ಟದ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಹೆಚ್.ಟಿ. ಪುಷ್ಪ, ಗ್ರಾಮದ ಹಿರಿಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿರಲಿದ್ದಾರೆ.
‘ಹಳ್ಳಿಧ್ವನಿ’ ಕಾರ್ಯಕ್ರಮದ ನಿಮಿತ್ತ ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವೈದ್ಯರು ಬಸವಾಘಟ್ಟ ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳ ಉಚಿತ ಆರೋಗ್ಯ ತಪಾಸಣೆ ಮಾಡಲಿದ್ದಾರೆ.ವಿಶೇಷವಾಗಿ ಹಾಸನದ ಆನಂದ್ ದಾಸ್ ಡಯಾಗ್ನೋಸ್ಟಿಕ್ ಸಂಸ್ಥೆಯವರು ರಕ್ತದ ಮಾದರಿಗಳ ಉಚಿತ ಪರೀಕ್ಷೆ ನಡೆಸುವ ಮೂಲಕ ಖಾಯಿಲೆಗಳ ಪತ್ತೆಗೆ ನೆರವಾಗಲಿದ್ದಾರೆ.

ಡಾ. ಶಿವಪ್ರಸಾದ ನೇತ್ರಾಲಯದ ವತಿಯಿಂದ ನೇತ್ರ ಪರೀಕ್ಷೆ ಶಿಬಿರ ನಡೆಯಲಿದೆ. ವಿ-3 ಡೆಂಟಲ್ ಕೇರ್ ವತಿಯಿಂದ ದಂತ ತಪಾಸಣೆ ಹಾಗೂ ಚಿಕಿತ್ಸೆ, ನುಆಲ್ಗಿ ನ್ಯಾನೋ ಬಯೋಟೆಕ್ ಸಂಸ್ಥೆಯ ವತಿಯಿಂದ ಪರಿಸರ ಪ್ರಿಯ ಕೃಷಿ ಕ್ರಮಗಳನ್ನು ಪರಿಚಯಿಸಲಾಗುತ್ತಿದೆ.
ಪ್ರಗತಿಪರ ಕೃಷಿಕ ಜಿ.ಎಸ್ ಗಿಡ್ಡೇಗೌಡ ಹಾಗೂ ರೋಟರಿ ಕ್ಲಬ್ ಆಫ್ ಕ್ವಾಂಟಾ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗುತ್ತದೆ. ಆಯ್ದ ಕೃಷಿಕರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ. ಮಲಬಾರ್ ಚಾರಿಟಬಲ್ ಟ್ರಸ್ಟ್ನ ಸಿಬ್ಬಂದಿ ಆಗಮಿಸುತ್ತಿದ್ದು, ಹಾಸನದ ರಕ್ತ ನಿಧಿ ಸಂಸ್ಥೆ ವತಿಯಿಂದ ರಕ್ತ ಸಂಗ್ರಹಿಸುವ ಕಾರ್ಯವು ಆಗಲಿದೆ. ಜಿಲ್ಲಾ, ತಾಲ್ಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ್‌ನ ಸಿಬ್ಬಂದಿ ವರ್ಗ ಆ ಊರಿನ ಸಮಸ್ಯೆಗಳತ್ತ ಗಮನಹರಿಸಲು ಈ ಕಾರ್ಯಕ್ರಮ ನೆರವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಹಾಸನ ಅಕಾಶವಾಣಿಯ ಸಹಾಯಕ ನಿರ್ದೇಶಕರಾದ ಬಿ.ವಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಡಾ. ವಿಜಯ್ ಅಂಗಡಿ, ಅರಕಲಗೂಡು ವಿ. ಮಧುಸೂದನ್ ಮತ್ತು ಆರ್.ಕೆ. ಲೊಕೇಶ್ ಅವರು ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.